ದೆಹಲಿ, ಜ 21 : ದೇಶದ ಗಮನ ಸೆಳೆಯುತ್ತಿರುವ ದೆಹಲಿ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕಡೆಯದಿನವಾಗಿದ್ದು, ವಿವಿಧ ರಾಜಕೀಯ ಪಕ್ಷಗಳಿಂದ ಚುನಾವಣಾ ಕದನಕ್ಕೆ ಅಂತಿಮ ವ್ಯೂಹ ರಚನೆಯಾಗುತ್ತಿದೆ.
ದೆಹಲಿಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಆದ್ಮಿ ಪಾರ್ಟಿ ಸೆಣಸುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಸಹ ತನ್ನದೇ ಆದ ಚುನಾವಣಾ ತಂತ್ರಗಾರಿಕೆಯಲ್ಲಿ ತೊಡಗಿದೆ.
ನಾಳೆ ಉಮೇದುವಾರಿಕೆ ಪರಿಶೀಲನೆ ನಡೆಯಲಿದ್ದು, ಇದೇ ೨೪ರಂದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದೆ.
ಚುನಾವಣೆಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ನಿನ್ನೆ ಬಿಡುಗಡೆ ಮಾಡಿದೆ. ಬಿಜೆಪಿ ಎರಡನೇ ಪಟ್ಟಿಯಲ್ಲಿ ೧೦ ವಿಧಾನಸಭಾ ಕ್ಷೇತ್ರಗಳಿಗೆ ಉಮೇದುವಾರರನ್ನು ಘೋಷಿಸಿದ್ದು, ಈ ಪೈಕಿ ಇಬ್ಬರು ಮಹಿಳೆಯರಿಗೆ ಅವಕಾಶ ಕಲ್ಪಿಸಿದೆ.
ಕಾಂಗ್ರೆಸ್ ಪಕ್ಷ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ರಮೇಶ್ ಸಬರ್‌ವಾಲ್ ಅವರನ್ನು ಕಣಕ್ಕಿಳಿಸಿದ್ದು, ಕೇಜ್ರೀವಾಲ್ ಅವರಿಗೆ ತೀವ್ರ ಪೈಪೋಟಿ ನೀಡುವ ನಿರೀಕ್ಷೆಯನ್ನು ಕಾಂಗ್ರೆಸ್ ಹೊಂದಿದೆ. ಕಾಂಗ್ರೆಸ್ ತನ್ನ ಮಿತ್ರ ಪಕ್ಷ ಆರ್‌ಜೆಡಿಗೆ ೪ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ.
ಬಿಜೆಪಿ ಸಹ ತನ್ನ ಮೈತ್ರಿ ಪಕ್ಷಗಳಾದ ಜೆಡಿಯು ಮತ್ತು ಎಲ್‌ಜೆಪಿಗೆ ೩ ಕ್ಷೇತ್ರಗಳನ್ನು ನೀಡಿದ್ದು, ಜೆಡಿಯು ೨ ಕ್ಷೇತ್ರಗಳಲ್ಲಿ ತನ್ನ ಉಮೇದುವಾರರನ್ನು ಕಣಕ್ಕಿಳಿಸಿದೆ. ಫೆಬ್ರವರಿ ೮ರಂದು ಚುನಾವಣೆ ನಡೆಯಲಿದ್ದು, ೧೧ರಂದು ಫಲಿತಾಂಶ ಪ್ರಕಟವಾಗಲಿದೆ.
ಕಳೆದ ಬಾರಿ 70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಾರ್ಟಿ 67 ರಲ್ಲಿ ದಿಗ್ವಿಜಯ ಸಾಧಿಸಿತ್ತು. ಬಿಜೆಪಿ ಕೇವಲ ಮೂರು ಕ್ಷೇತ್ರಗಳಲ್ಲಿ ಗೆದ್ದಿದ್ದರೆ ಕಾಂಗ್ರೆಸ್ ಖಾತೆ ತೆರೆಯಲು ಸಹ ಸಾಧ್ಯವಾಗಿರಲಿಲ್ಲ.