ರಾಜ್ಯಸಭೆ; ಪ್ರತಿಪಕ್ಷಗಳಿಂದ ಸಿಎಎ, ಎನ್ ಆರ್ ಸಿ ಪ್ರಸ್ತಾಪ, ಗದ್ದಲ, ಕೋಲಾಹಲ

ನವದೆಹಲಿ, ಫೆ 4 :     ಪೌರತ್ವ ತಿದ್ದುಪಡಿ ಕಾಯ್ದೆ  - ಸಿಎಎ  ಹಾಗೂ  ರಾಷ್ಟ್ರೀಯ ಪೌರತ್ವ ನೋಂದಣಿ  ಕುರಿತು  ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು  ಮಂಗಳವಾರ  ಪ್ರಸ್ತಾಪಿಸಿದ  ಕಾರಣ  ಶೂನ್ಯ ಅವಧಿಯ  ಹಾಗೂ ಪ್ರಶ್ನೋತ್ತರ ಕಲಾಪದ ವೇಳೆ  ಗದ್ದಲದ ದೃಶ್ಯಗಳು ಕಂಡು ಬಂದವು.

ಕಾಗದ ಪತ್ರಗಳ ಮಂಡನೆಯ ನಂತರ   ಸಭಾಪತಿ  ಎಂ. ವೆಂಕಯ್ಯನಾಯ್ಡು,    ಸದಸ್ಯ  ಟಿ. ಸುಬ್ಬಿರಾಮಿರೆಡ್ಡಿ  ಅವರಿಗೆ       ಕೊರೊನಾ ವೈರಸ್  ಸಂಬಂಧಿಸಿದ  ವಿಷಯ   ಪ್ರಸ್ತಾಪಿಸಲು ಸೂಚನೆ ನೀಡಿದರು.   ಆಗ  ಕೂಡಲೇ  ಎತ್ತುನಿಂತ  ಅಖಿಲ ಭಾರತ ತೃಣ ಮೂಲ ಕಾಂಗ್ರೆಸ್ ನ  ಡೆರಿಕ್ ಓ ಬಿರನ್,   ಪೌರತ್ವ ತಿದ್ದುಪಡಿ ಕಾಯ್ದೆ  ಅನುಮೋದನೆಯಿಂದ  ದೇಶಾದ್ಯಂತ ಉದ್ಬವಾಗಿರುವ  ಪರಿಸ್ಥಿತಿಯನ್ನು  ಚರ್ಚಿಸಲು  ಶೂನ್ಯ ವೇಳೆ ಕಲಾಪ ರದ್ದುಪಡಿಸುವಂತೆ  ತಾವು  ನಿಯಮ  267 ರಡಿ  ನೋಟೀಸ್  ನೀಡಿರುವುದಾಗಿ ಹೇಳಿದರು.

ಇದಕ್ಕೆ  ಪ್ರತಿಕ್ರಿಯಿಸಿದ  ಸಭಾಪತಿ  ವೆಂಕಯ್ಯ ನಾಯ್ಡು,   ಈ ವಿಷಯ ಸಂಬಂಧ  ಸೋಮವಾರ ತಾವು ರೂಲಿಂಗ್ ನೀಡಿದ್ದು, ಮತ್ತೆ ಈ ವಿಷಯವನ್ನು   ಸದನದಲ್ಲಿ ಪ್ರಸ್ತಾಪಿಸುವಂತಿಲ್ಲ. ರಾಷ್ಟ್ರಪತಿ ಭಾಷಣದಲ್ಲಿ ಈ ವಿಷಯ ಉಲ್ಲೇಖವಾಗಿದ್ದು,  ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯ  ಚರ್ಚೆಯ ವೇಳೆ ಈ ವಿಷಯ ಪ್ರಸ್ತಾಪಿಸಬಹುದು  ಎಂದು  ಮನವರಿಕೆ ಮಾಡಲು ಯತ್ನಿಸಿದರು. 

ಸಭಾಪತಿಗಳ  ರೂಲಿಂಗ್  ನಿಂದ   ಅಸಮಧಾನಗೊಂಡ   ಕಾಂಗ್ರೆಸ್  ಹಾಗೂ ತೃಣಮೂಲ ಕಾಂಗ್ರೆಸ್  ಸದಸ್ಯರು   ಸಭಾಪತಿ ಎದುರಿನ ಅಂಗಳಕ್ಕೆ ತೆರಳಿ   ಸಿಎಎ ಹಾಗೂ ಎನ್ ಆರ್ ಸಿ ವಿರುದ್ದ  ಘೋಷಣೆ ಕೂಗಲು ಆರಂಭಿಸಿದರು.  ಈ ಗದ್ದಲ, ಕೋಲಾಹಲದ ನಡುವೆಯೇ  ಸಭಾಪತಿ  ಕಲಾಪ ಮುಂದುವರಿಸಿ, ಶೂನ್ಯ ವೇಳೆಯ   ವಿಷಯ ಪ್ರಸ್ತಾಪಿಸುವಂತೆ  ಸದಸ್ಯರಿಗೆ  ಸೂಚಿಸಿದರು

ಇದಕ್ಕೂ ಮುನ್ನ   ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್  ಸದನದಲ್ಲಿ  ಕೆಲ ಕಾಗದ ಪತ್ರ ಮಂಡಿಸಲು ಎದ್ದು ನಿಂತಾಗ  ಪ್ರತಿಪಕ್ಷಗಳ  ಸದಸ್ಯರು   ಗದ್ದಲ ಸೃಷ್ಟಿಸಿ  ದೃಶ್ಯಗಳು ಕಂಡು ಬಂದವು.