ರಾಜ್ಯಸಭಾ ಚುನಾವಣೆ ನಾಲ್ವರು ಅಭ್ಯರ್ಥಿಗಳ ಅವಿರೋಧ ಅಯ್ಕೆ

ಬೆಂಗಳೂರು, ಜೂ  12, ವಿಧಾನಸಭೆಯಿಂದ ರಾಜ್ಯಸಭೆಗೆ  ನಾಲ್ಕು ಸ್ಥಾನಗಳಿಗೆ ನಡೆದ   ಚುನಾವಣೆಯಲ್ಲಿ ಮೂರು ಪಕ್ಷಗಳ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪಕ್ಷೇತರ ಅಭ್ಯರ್ಥಿ ಸಂಗಮೇಶ್ ಚಿಕ್ಕನರಗುಂದ ನಾಮಪತ್ರ ತಿರಸ್ಕೃತಗೊಂಡ  ಹಿನ್ನೆಲೆಯಲ್ಲಿ ನಾಲ್ವರು ಮಾತ್ರ ಕಣದಲ್ಲಿದ್ದರು.ನಾಮಪತ್ರಗಳನ್ನು  ವಾಪಸ್ ಪಡೆಯಲು ಇಂದು ಕೊನೆಯ ದಿನವಾಗಿತ್ತು. ಮಧ್ಯಾಹ್ನದವರೆಗೆ  ಯಾರೂ ಉಮೇದುವಾರಿಕೆ  ವಾಪಸ್ ಪಡೆಯದ ಕಾರಣ ನಾಲ್ವರು ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ ಎಂದು  ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ  ಘೋಷಿಸಿದರು. ಜೆಡಿಎಸ್  ಅಭ್ಯರ್ಥಿ ಎಚ್.ಡಿ.ದೇವೇಗೌಡ, ಕಾಂಗ್ರೆಸ್ ಅಭ್ಯರ್ಥಿ ಎಂ. ಮಲ್ಲಿಕಾರ್ಜುನ ಖರ್ಗೆ,  ಬಿಜೆಪಿ ಅಭ್ಯರ್ಥಿ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಅವರು ಅವಿರೋಧವಾಗಿ  ಆಯ್ಕೆಯಾಗಿದ್ದಾರೆ ಎಂದು ಅವರು ಪ್ರಕಟಿಸಿದರು.

ಅಶೋಕ್  ಗಸ್ತಿ, ಈರಣ್ಣ ಕಡಾಡಿ ಅವರು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಜೊತೆ  ಕಾರ್ಯದರ್ಶಿ ಕಚೇರಿಗೆ ಆಗಮಿಸಿ ಅವಿರೋಧ ಅಯ್ಕೆ ಪ್ರಮಾಣ ಪತ್ರಗಳನ್ನು ಪಡೆದರು. ಬಳಿಕ  ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಗೆ ಆಯ್ಕೆ  ಪ್ರಮಾಣಪತ್ರವನ್ನು ಚುನಾವಣಾಧಿಕಾರಿಯಿಂದ ಪಡೆದರು.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪರವಾಗಿ ಪುತ್ರ ಎಚ್.ಡಿ.ರೇವಣ್ಣ ವಿಧಾನ ಸಭೆ ಕಾರ್ಯದರ್ಶಿಯಿಂದ ಪ್ರಮಾಣ ಪತ್ರ ಪಡೆದರು.ಅಭ್ಯರ್ಥಿ  ಎಚ್.ಡಿ.ದೇವೇಗೌಡ  ಮನೆಗೆ ತೆರಳಿ ಫಾರಂ 22ಕ್ಕೆ ಸಹಿಯನ್ನು  ಪಡೆದುಕೊಂಡು  ಚುನಾವಣಾಧಿಕಾರಿಗೆ ಎಚ್ ಡಿ.ರೇವಣ್ಣ ಸಲ್ಲಿಸಿ ಚುನಾವಣಾಧಿಕಾರಿಯಿಂದ ಪ್ರಮಾಣಪತ್ರ ಪಡೆದು  ಕೊಂಡರು. ಬಿಜೆಪಿಯಿಂದ  ಮೂರನೇ ಹಾಗೂ ಕಾಂಗ್ರೆಸ್ ಪಕ್ಷದಿಂದ‌‌ ಎರಡನೆ ಅಭ್ಯರ್ಥಿ ಕಣಕ್ಕಿಳಿಸದಿದ್ದ ಕಾರಣ  ಚುನಾವಣೆ ನಡೆಯದೆ ನಾಲ್ವರು ರಾಜ್ಯಸಭೆಗೆ ಪ್ರವೇಶ ಪಡೆದಿದ್ದಾರೆ.