ಬೆಂಗಳೂರು, ಜೂ 2, ರಾಜ್ಯಸಭಾ ಚುನಾವಣೆಯಲ್ಲಿ ತಮ್ಮನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡುವ ವಿಚಾರದ ಬಗ್ಗೆ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಗುಟ್ಟು ಬಿಟ್ಟುಕೊಡಲು ನಿರಾಕರಿಸಿದ್ದಾರೆ. ಸದಾಶಿವ ನಗರದ ತಮ್ಮ ನಿವಾಸದಲ್ಲಿ ರಾಜ್ಯಸಭೆ ಚುನಾವಣೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸದೆ ನುಣುಚಿಕೊಂಡರು. ಚುನಾವಣೆ ವಿಚಾರದಲ್ಲಿ ವರಿಷ್ಠರ ನಿರ್ಧಾರವೇ ಅಂತಿಮ ಎಂದರು. ರಾಜ್ಯ ಸಭೆ ಚುನಾವಣೆಯ ಬಗೆ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ವಿಚಾರದ ಬಗ್ಗೆ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ಹಾಗೂ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ನೋಡಿಕೊಳ್ಳುತ್ತಾರೆ. ತಮ್ಮನ್ನು ಅಭ್ಯರ್ಥಿ ಮಾಡುವ ವಿಚಾರದ ಬಗ್ಗೆ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದರು.ರಾಜ್ಯ ಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತಂತೆ ರಾಜ್ಯ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ. ರಾಜಕೀಯ ವಿಚಾರಗಳಲ್ಲಿ ಏನೇನು ತೀರ್ಮಾನ ತೆಗೆದುಕೊಳ್ಳುತ್ತಾರೋ ತೆಗೆದುಕೊಳ್ಳಲಿ. ಈ ಕುರಿತು ಪ್ರತಿಕ್ರಿಯೆ ನೀಡಿದರೆ ಸರಿ ಹೋಗುವುದಿಲ್ಲ ಎಂದು ಖರ್ಗೆ ಹೇಳಿದರು.