ನವದೆಹಲಿ, ನ. 18 : ರಾಜ್ಯಸಭೆಯ 250ನೇ ಅಧಿವೇಶನ ಸೋಮವಾರ ಆರಂಭವಾಗಲಿದ್ದು ಈವರೆಗೆ 3817 ಮಸೂದೆಗಳಿಗೆ ಒಪ್ಪಿಗೆ ದೊರಕಿರುವುದು ಇದರ ವಿಶೇಷವಾಗಿದೆ. 1952ರ ಮೇ ತಿಂಗಳಲ್ಲಿ ರಾಜ್ಯಸಭೆಯ ಮೊದಲ ಅಧಿವೇಶನ ನಡೆದ ಬಳಿಕ ಇಂದಿನವರೆಗೆ ರಾಜ್ಯಸಭೆ ನಡೆದು ಬಂದ ಹಾದಿಯ ಬಗ್ಗೆ ರಾಜ್ಯಸಭೆಯ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಪ್ರಕಟಣೆ ಹೊರಡಿಸಿದ್ದಾರೆ. ರಾಜ್ಯಸಭೆ ನಡೆಸಿದ ಶಾಸಕಾಂಗ ಕಾರ್ಯಗಳ ಬಗ್ಗೆ ವಿಶ್ಲೇಷಣೆಗೆ ಇದೇ ಮೊದಲ ಬಾರಿಗೆ ರಾಜ್ಯಸಭೆ ಮೊದಲ ಪ್ರಯತ್ನ ನಡೆಸಿದ್ದು, 249ನೇ ಅಧಿವೇಶನದ ಕೊನೆಯ ವರೆಗೆ ಈ ಪೈಕಿ 60 ಮಸೂದೆಗಳು ಲೋಕಸಭೆಯ ವಿಸರ್ಜನೆ ಕಾರಣದಿಂದ ಅನೂರ್ಜಿತಗೊಂಡಿವೆ. ಮೊದಲ ಸಾರ್ವತ್ರಿಕ ಚುನಾವಣೆ 1952ರಲ್ಲಿ ನಡೆದ ನಂತರ ಬಳಿಕ 249 ನೇ ಅಧಿವೇಶನದವರೆಗೆ ಒಟ್ಟು 3817 ಮಸೂದೆಗಳನ್ನು ಸದನದಲ್ಲಿ ಅಂಗೀಕರಿಸಲಾಗಿದೆ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ. 250ನೇ ಅಧಿವೇಶನದ ಹಿನ್ನೆಲೆಯಲ್ಲಿ ಮದ್ಯಾಹ್ನದ ನಂತರದ ಕಲಾಪದಲ್ಲಿ ರಾಜ್ಯಸಭೆಯಲ್ಲಿ "ಭಾರತೀಯ ರಾಜಕೀಯಲ್ಲಿ ರಾಜ್ಯಸಭೆಯ ಪಾತ್ರ: ಸುಧಾರಣೆಯ ಅಗತ್ಯ ಎಂಬ ವಿಷಯದ ಬಗ್ಗೆ ಚರ್ಚೆ ಹಮ್ಮಿಕೊಳ್ಳಲಾಗಿದೆ. ಜೊತೆಗೆ ರಾಜ್ಯಸಭೆ ರೂಪುಗೊಂಡ ಸ್ಮರಣಸಂಚಿಕೆ, 250 ರೂಪಾಯಿ ಮೌಲ್ಯದ ಬೆಳ್ಳಿ ನಾಣ್ಯ ಮತ್ತು 5 ರೂ. ಅಂಚೆ ಚೀಟಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.