ಲಖನೌ, ಮೇ 21 , ಮಾಜಿ ಪ್ರಧಾನಿ ಹಾಗೂ ತಮ್ಮ ತಂದೆ ರಾಜೀವ್ ಗಾಂಧಿ ಅವರ 30ನೇ ಪುಣ್ಯತಿಥಿಯ ಅಂಗವಾಗಿ ಗುರುವಾರ ಮಧ್ಯಾಹ್ನ ಸಾಮಾಜಿಕ ಜಾಲತಾಣದ ನೇರ ಪ್ರಸಾರ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಕಟಿಸಿದ್ದಾರೆ. ಗುರುವಾರ ಮಧ್ಯಾಹ್ನ 1 ಗಂಟೆಗೆ ಕಾಂಗ್ರೆಸ್ ಪಕ್ಷ ಫೇಸ್ ಬುಕ್ ಲೈವ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಉತ್ತರಪ್ರದೇಶದಲ್ಲಿ ವಲಸಿಗರಿಗೆ 1000 ಬಸ್ ಗಳನ್ನು ನಿಯೋಜಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ -ಬಿಜೆಪಿ ನಡುವಿನ ರಾಜಕೀಯ ಆರೋಪ-ಪ್ರತ್ಯಾರೋಪಗಳ ಕುರಿತು ಈ ಕಾರ್ಯಕ್ರಮದಲ್ಲಿ ಚರ್ಚಿಸಲಾಗುವುದು. ಕೋವಿಡ್ -19 ನಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ರಾಜಕೀಯ ಮಾಡುತ್ತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಇದು ವೇದಿಕೆ ಕಲ್ಪಿಸಲಿದೆ ಎಂದರು. ಇದು ದೇಶದ ಜನರು ಮತ್ತು ಬಡವರಿಗಾಗಿ ಹೋರಾಡುತ್ತಾ ತಮ್ಮ ಜೀವ ತ್ಯಾಗ ಮಾಡಿದ ರಾಜೀವ್ ಗಾಂಧಿ ಅವರ 30ನೇ ವಾರ್ಷಿಕ ಪುಣ್ಯತಿಥಿಯಂದು ನಿಜವಾದ ಶ್ರದ್ಧಾಂಜಲಿಯಾಗಲಿದೆ ಎಂದಿದ್ದಾರೆ.