ಹದಿ ಹರೆಯದ ಮಕ್ಕಳ ಬಗ್ಗೆ ಹೆಚ್ಚು ಜಾಗೃತಿ ಇರಲಿ: ಡಾ. ಪಾಂಡುರಂಗಿ

There should be more awareness about teenagers: Dr. Pandurangi

ಹದಿ ಹರೆಯದ ಮಕ್ಕಳ ಬಗ್ಗೆ ಹೆಚ್ಚು ಜಾಗೃತಿ ಇರಲಿ: ಡಾ. ಪಾಂಡುರಂಗಿ  

ಧಾರವಾಡ 19: ಮಕ್ಕಳನ್ನು ಸರಿದಾರಿಯಲ್ಲಿ ನಡೆಯುವಂತೆ ನೋಡಿಕೊಳ್ಳುವ ಮಹತ್ವದ ಜವಾಬ್ದರಿ ಪಾಲಕರ ಮೇಲಿದೆ. ಪ್ರೌಢಶಾಲೆಯಲ್ಲಿ ಓದುವ ಮಕ್ಕಳಿಂದ ಹಿಡಿದು ಹದಿಹರೆಯದ ಮಕ್ಕಳ ಬಗ್ಗೆ ಜಾಗೃತಿವಹಿಸಬೇಕು. ಆದಷ್ಟು ಮೊಬೈಲ್, ಟಿವಿ ಗಳಿಂದ ಮಕ್ಕಳು ದೂರವಿರುವಂತೆ ಬೇಕು. ಆಟ, ಅಧ್ಯಯನ ಅವರಿಗೆ ಪ್ರಥಮ ಆಧ್ಯತೆ ಆಗುವಂತೆ ನೋಡಿಕೊಳ್ಳಬೇಕೆಂದು ಖ್ಯಾತ ಮನೋವೈದ್ಯ ಡಾ.ಆನಂದ ಪಾಂಡುರಂಗಿ ಅವರು ಹೇಳಿದರು.  

ಅವರು ನಿನ್ನೆ ಜ.18ರಂದು ಸಂಜೆ ನಗರದ ಕಮಲಾಪುರದಲ್ಲಿ ಇರುವ ಜ್ಞಾನಜ್ಯೋತಿ ಸಮೂಹ ಶಿಕ್ಷಣ ಸಂಸ್ಥೆಯ ವಿವಿಧ ಶಾಲೆ, ಕಾಲೇಜುಗಳ ಪ್ರಸಕ್ತ ಸಾಲಿನ ವಾರ್ಷಿಕೋತ್ಸವ ಉದ್ಘಾಟಿಸಿ, ಮಾತನಾಡಿದರು. ಮಕ್ಕಳಲ್ಲಿ ಶಿಕ್ಷಣ ಮೌಲ್ಯ ಹೆಚ್ಚಿಸಬೇಕು. ಮಕ್ಕಳ ಮತ್ತು ಪಾಲಕರ ಹಾಗೂ ಶಿಕ್ಷಕಕರ ಮನಸ್ಥಿತಿ ಒಂದಾಗಬೇಕು. ಇದು ಮಕ್ಕಳಲ್ಲಿ ಪರಿಪೂರ್ಣವಾದ ಮತ್ತು ಸಮಗ್ರವಾದ ವ್ಯಕ್ತಿತ್ವ ಬೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಮಕ್ಕಳ ಆಟ,ಪಾಠ, ಊಟ ಎಲ್ಲವೂ ಸರಿಯಾದ ಸಮಯಕ್ಕೆ ಆಗಬೇಕು. ಮಕ್ಕಳಿಗೆ ಹದಿ ಹರೆಯದ ವರ್ಷಗಳಲ್ಲಿ ಮಾರ್ಗದರ್ಶನ ಅಗತ್ಯವಾಗಿದೆ. ವಿಶೇಷವಾಗಿ 8, 9,10 ನೇ ವರ್ಗಗಗಳಲ್ಲಿನ ವಿದ್ಯಾರ್ಥಿಗಳದ್ದು, ಆಕರ್ಷಣೆಯ ವಯಸ್ಸು. ಪಾಲಕರು ಎಚ್ಚರಿಕೆವಹಿಸಬೇಕು ಎಂದು ಮಕ್ಕಳ ಪಾಲಕರಿಗೆ ಡಾ.ಆನಂದ ಪಾಂಡುರಂಗಿ ಅವರು ಕಿವಿಮಾತು ಹೇಳಿದರು.  

ಮಕ್ಕಳ ಸಮಗ್ರ ವ್ಯಕ್ತಿತ್ವ ಬೆಳೆಸುವಲ್ಲಿ ಶಿಕ್ಷಣ ಸಂಸ್ಥೆ, ಕುಟುಂಬದವರ ಗಮನವಿರಲಿ. ಮಕ್ಕಳ ಕನಸುಗಳನ್ನು ನನಸು ಮಾಡಿ. ಆದರೆ ನಿಮ್ಮ ಕನಸುಗಳನ್ನು ಅವರ ಮೇಲೆ ಹೆರಬೇಡಿ ಎಂದು ಅವರು ತಿಳಿಸಿದರು. ಪ್ರತಿ ಮಗುವಿಗೆ ಆಧುನಿಕತೆ ಪಾಠ ಕಲಿಸಿ. ಟಿವಿ, ಮೊಬೈಲ್ ಗಳ ಬದಲಿಗೆ, ಅವರಲ್ಲಿ ಪುಸ್ತಕ ಓದುವ ಹುಚ್ಚು ಬೆಳೆಸಿ. ನಿಮ್ಮ ಮಗುವಿನ ಸಾಮರ್ಥ್ಯದ ಬಗ್ಗೆ ನಿಮಗೆ ವಿಶ್ವಾಸವಿರಲಿ. ಮಗುವಿಗೆ ಉತ್ತಮ ಜೀವನ ಕಲ್ಪಿಸುವಲ್ಲಿ ಪಾಲಕರ ಪಾತ್ರ ಬಹುಮುಖ್ಯವಾಗಿದೆ ಎಂದು ಡಾ.ಆನಂದ ಪಾಂಡುರಂಗಿ ಅವರು ಹೇಳಿದರು. ಪ್ರತಿ ಮಗು ಚನ್ನಾಗಿರುತ್ತದೆ. ನಾವು ಮನೆ ವಾತಾವರಣ ಉತ್ತಮವಾಗಿರುವಂತೆ ಎಚ್ಚರಿಕೆವಹಿಸಬೇಕು. ಮಕ್ಕಳಿಗೆ ಅನುಭವದ ಮಾತು ಇರಬೇಕು. ಅಂದಾಗ ಅವರಿಗೆ ಸನ್ಮಾರ್ಗ ಕಾಣುತ್ತದೆ ಎಂದು ಅವರು ತಿಳಿಸಿದರು.  

ಮುಖ್ಯ ಅತಿಥಿಗಳಾಗಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್‌.ಎಸ್‌.ಕೆಳದಿಮಠ, ಶಹರ ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಜಿಲ್ಲಾ ಸಹಾಯಕ ವಾರ್ತಾಧಿಕಾರಿ ಡಾ.ಎಸ್‌.ಎಂ.ಹಿರೇಮಠ, ಶಿಕ್ಷಣ ಇಲಾಖೆ ಅಧಿಕಾರಿ ಮಂಜುನಾಥ ಅಡವೇರ, ಮಂಗಳೂರಿನ ಯುನಿವರ್ಸಲ್ ನಾಲೆಡ್ಜ್‌ ಟ್ರಸ್ಟ್‌ ಸದಸ್ಯೆ ಅಶ್ವಿನಿ ಅಳಟಗಿ ನಾಯಕ್ ಅವರು ಭಾಗವಹಿಸಿದ್ದರು.  

ಜ್ಞಾನ ಜ್ಯೋತಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪುತ್ರಯ್ಯ ರುದ್ರಯ್ಯ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಸಂಗಯ್ಯ ಠಾಣಯ್ಯ ಹಿರೇಮಠ ಸೇರಿದಂತೆ ಇತರ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಾಚಾರ್ಯೆ ಗಿರಿಜಾ ಹೊಟ್ಟಿ ವಾರ್ಷಿಕ ವರದಿ ಮಂಡಿಸಿದರು. ಐಟಿಐ ಕಾಲೇಜು ಪಾಚಾರ್ಯ ಮೋಹಮ್ಮದ ಅಬ್ಬಾಸ ಸದರಬಾಯಿ ವಂದಿಸಿದರು. ಶಿಕ್ಷಕೀಯರಾದ ಅಫ್ರೀನ್ ಭಾನು ಗುಳಗುಂಡಿ ಹಾಗೂ ಶೃತಿ ವಾಲಿ ಕಾರ್ಯಕ್ರಮ ನಿರೂಪಿಸಿದರು.  

ವೇದಿಕೆ ಕಾರ್ಯಕ್ರಮ ನಂತರ ವಿವಿಧ ವರ್ಗಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಜ್ಞಾನಜ್ಯೋತಿ ಸಮೂಹ ಶಿಕ್ಷಣ ಸಂಸ್ಥೆಯ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳ ಪಾಲಕರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.