ಬೆಂಗಳೂರು 23: ರಾಯಲ್ ಚಾಲೆಂಜರ್ಸ್ ಬೆಂಗಳೂರು ನೂತನ 2025ರ ಸೀಸನ್ ಗೆ ರಜತ್ ಪಾಟಿದಾರ್ ರನ್ನು ತಂಡದ ನಾಯಕ ನನ್ನಾಗಿ ಘೋಷಣೆ ಮಾಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 2025ರ ಸೀಸನ್ ಗೆ ಮುನ್ನಡೆಸಲಿದ್ದಾರೆ. ಮಧ್ಯಪ್ರದೇಶ ಮೂಲದ ರಜತ್ ಪಾಟೀದಾರ್ ಕಳೆದ ಕೆಲವು ಸೀಸನ್ ಗಳಲ್ಲಿ ಆರ್ ಸಿಬಿ ಪರ ಆಡಿದ್ದರು.
ಐಪಿಎಲ್ 2022 ರ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 54 ಎಸೆತಗಳಲ್ಲಿ ಅಜೇಯ 112 ರನ್ ಗಳಿಸುವ ಮೂಲಕ ರಜತ್ ಪಾಟಿದಾರ್ ಗಮನ ಸೆಳೆದಿದ್ದರು. ಬದಲಿ ಆಟಗಾರನಾಗಿ ಸೇರಿಕೊಂಡ ಅವರು, 152.75 ಸ್ಟ್ರೈಕ್ ರೇಟ್‌ನಲ್ಲಿ 333 ರನ್ ಗಳಿಸುವ ಮೂಲಕ ಆರ್‌ಸಿಬಿ ಪರ ಆ ಸೀಸನ್ ನ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರು.
ಐಪಿಎಲ್ 2021 ಕ್ಕೂ ಮೊದಲು ರಜತ್ ಪಾಟಿದಾರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಖರೀದಿ ಮಾಡಿತ್ತು. ಆದರೆ ಆ ಋತುವಿನಲ್ಲಿ ಅವರು ಕೇವಲ ನಾಲ್ಕು ಪಂದ್ಯಗಳನ್ನು ಆಡಿದ್ದರು, ಬಳಿಕ ಅವರನ್ನು ತಂಡದಿಂದ ರಿಲೀಸ್ ಮಾಡಲಾಗಿತ್ತು.
2022 ರಲ್ಲಿ, ಅವರು ಬದಲಿ ಆಟಗಾರನಾಗಿ ತಂಡವನ್ನು ಸೇರಿಕೊಂಡರು. ಹಿಮ್ಮಡಿಯ ಗಾಯದಿಂದಾಗಿ ಅವರು ಐಪಿಎಲ್ 2023 ತಪ್ಪಿಸಿಕೊಂಡರು. 2024ರಲ್ಲಿ ತಂಡದ ಪ್ರಮುಖ ಆಟಗಾರನಾಗಿದ್ದ ಪಾಟಿದಾರ್ ರನ್ನು 2025ರ ಹರಾಜಿಗೆ ಮೊದಲು ಫ್ರಾಂಚೈಸಿ ತನ್ನಲ್ಲೇ ಉಳಿಸಿಕೊಂಡಿತ್ತು.