ಜೈಪುರ 30: ರಾಜಸ್ತಾನದಲ್ಲಿ ಸಂಭವಿಸಿದ ಬೋರ್ವೆಲ್ ದುರಂತ ಸಂಭವಿಸಿ ಬರೊಬ್ಬರಿ 7 ದಿನಗಳೇ ಕಳೆದರೂ ಕಾರ್ಯಾಚರಣೆ ಮಾತ್ರ ಇನ್ನೂ ಮುಕ್ತಾಯವಾಗಿಲ್ಲ. ಮಗು ಜೀವಂತವಾಗಿರುವ ಆಸೆ ದಿನೇ ದಿನೇ ಕರಗುತ್ತಿದೆ.
ರಾಜಸ್ತಾನದ ಕಿರಾತಪುರದ ಬದಿಯಾಲಿ ಧಾನಿಯಲ್ಲಿ ಮೂರು ವರ್ಷದ ಚೇತನಾ ಎಂಬ ಬಾಲಕಿ ಕೊಳವೆ ಬಾವಿಗೆ ಬಿದ್ದು ಜೀವನ್ಮರಣ ಹೋರಾಟ ನಡೆಸಿದ್ದಾಳೆ. ಕೊಳವೆ ಬಾವಿ ಪಕ್ಕದಲ್ಲಿ ಮಗು ಚೇತನಾ ತನ್ನ ತಂದೆ ಜೊತೆ ಆಟವಾಡುತ್ತಿರುವಾಗ ಬಿದ್ದಿದ್ದಾಳೆ.
ರಕ್ಷಿಸುವ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದ್ದು, ಎಲ್ಲಾ ಸಂಭಾವ್ಯ ಆಯ್ಕೆಗಳನ್ನು ಪ್ರಸ್ತುತ ಅನ್ವೇಷಿಸಲಾಗುತ್ತಿದೆ ಮತ್ತು ಚರ್ಚಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.
ಕೋಟ್‌ಪುಟ್ಲಿ-ಬೆಹ್ರೋರ್ ಜಿಲ್ಲಾಧಿಕಾರಿ ಕಲ್ಪನಾ ಅಗರ್ವಾಲ್ ಅವರು ಈ ಬಗ್ಗೆ ಮಾತನಾಡಿ ನಾವು ಸುರಂಗವನ್ನು ನಿರ್ಮಿಸುತ್ತಿದ್ದೇವೆ... ಸುರಂಗ ಮಾರ್ಗವು ಕಲ್ಲಿನಿಂದ ಕೂಡಿರುವುದರಿಂದ ಅದನ್ನು ಕೊರೆಯುವುದು ಸವಾಲಾಗಿದೆ... ಮೇಲ್ಭಾಗ ಮತ್ತು ಕೆಳಭಾಗದಲ್ಲಿ ತಾಪಮಾನದಲ್ಲಿ ಭಾರಿ ವ್ಯತ್ಯಾಸವಿದೆ... ಎಲ್ಲಾ ಆಯ್ಕೆಗಳನ್ನು ಪರಿಗಣಿಸಲಾಗುತ್ತಿದೆ ಮತ್ತು ಚರ್ಚಿಸಲಾಗುತ್ತಿದೆ... ಅತ್ಯುತ್ತಮ ಉಪಕರಣಗಳು ಲಭ್ಯವಾಗುವಂತೆ ಮಾಡಲಾಗಿದೆ ಎಂದು ಅವರು ಹೇಳಿದರು.
ಗುರುವಾರ ರಾತ್ರಿಯಿಂದ ನಿರಂತರ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೀವ್ರವಾಗಿ ಅಡ್ಡಿಯಾಗಿವೆ. ಹಾಲಿ ಮಳೆಯು ಸುತ್ತಮುತ್ತಲಿನ ಮಣ್ಣನ್ನು ಜಾರುವಂತೆ ಮಾಡಿದೆ. ವೆಲ್ಡಿಂಗ್ ಮತ್ತು ಕೇಸಿಂಗ್ ಪೈಪ್ ಅನ್ನು ಕೆಳಕ್ಕೆ ಇಳಿಸುವುದು ಸೇರಿದಂತೆ ನಿರ್ಣಾಯಕ ಕಾರ್ಯಾಚರಣೆಗಳನ್ನು ಸಂಕೀರ್ಣಗೊಳಿಸಿದೆ ಎಂದು ಅವರು ಹೇಳಿದರು.