ನೀವಿರುವಲ್ಲೇ ಜಾಗೃತಿ ಮೂಡಿಸಿ - ಜಿಲ್ಲಾಧಿಕಾರಿ: ನನ್ನನ್ನು ಯಾರೂ ಪ್ರಶ್ನಿಸುವಂತಿಲ್ಲ ರೇಣುಕಾಚಾರ್ಯ

ದಾವಣಗೆರೆ, ಮಾ.29, ಕಳೆದೆರಡು ದಿನಗಳಿಂದ ದಾವಣಗೆರೆ ಮತ್ತು ಮತಕ್ಷೇತ್ರ ಹೊನ್ನಾಳಿಯಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕೊರೋನಾ ವೈರಸ್ ನಿಯಂತ್ರಣ ಕುರಿತ ಜಾಗೃತಿಗಾಗಿ ಓಡಾಡುತ್ತಿದ್ದು, ಅವರ ಹಿಂದೆ ಬೆಂಬಲಿಗರು ಕಾರ್ಯಕರ್ತರ ಪಡೆಯೇ ತಿರುಗುತ್ತಿದೆ.ಸಾಮಾಜಿಕ ಅಂತರದ ಬಗ್ಗೆ ಪಾಠ ಹೇಳುವ ರೇಣುಕಾಚಾರ್ಯರ ಹಿಂಬಾಲಿಕರು ಮಾತ್ರ ದಂಡುದಂಡಾಗಿ ರಸ್ತೆಗಳಿಗೆ ಲಗ್ಗೆ ಇಡುತ್ತಿದ್ದಾರೆ. ಇದನ್ನು ಗಮನಿಸಿದ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಶಾಸಕ ರೇಣುಕಾಚಾರ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಪ್ರಚಾರಕ್ಕಾಗಿ ಓಡಾಡುವುದನ್ನು ನಿಲ್ಲಿಸುವಂತೆ ಸೂಚಿಸಿರುವ ಜಿಲ್ಲಾಧಿಕಾರಿಗಳು, ಶಾಸಕರ ಜತೆ ಹಲವಾರು ಜನರಿದ್ದ ಕಾರಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನೀವಿರುವ ಜಾಗದಲ್ಲೇ ಮಾಡಿ ಎಂದು ಸಲಹೆ ನೀಡಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ರೇಣುಕಾಚಾರ್ಯ, ನಾನು ಜನಪ್ರತಿನಿಧಿ. ಅಲ್ಲಿ ಹೋಗಬೇಡ, ಇಲ್ಲಿ ಹೋಗಬೇಡ ಎಂದು ಯಾರೂ ಹೇಳುವಂತಿಲ್ಲ. ನನ್ನನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ.ಸಂಸದರ ಮನೆಗೆ ನಾನು, ಮೇಯರ್ ಹೋಗಿದ್ದೇವೆ. 10 ಅಡಿ ದೂರ ನಿಂತು ಆರೋಗ್ಯ ವಿಚಾರಿಸಿದೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.ಇನ್ನು ಮೇಯರ್ ಬಿ.ಜಿ. ಅಜಯ ಕುಮಾರ್ ಮಾತನಾಡಿ, ರೇಣುಚಾರ್ಯ ಅವರು ಮುಖ್ಯಮಂತ್ರಿಗಳ ಕಾರ್ಯದರ್ಶಿ. ಅವರು ರಾಜ್ಯದ ಎಲ್ಲಕಡೆ ಹೋಗಬಹುದು ಎಂದು ಸಮರ್ಥಿಸಿದರು.