ಕೋಲಾರದಲ್ಲಿ ಬರುವ 2024ರೊಳಗೆ ರೈಲ್ವೆಕೋಚ್ ಫ್ಯಾಕ್ಟರಿ ಆರಂಭಿಸಿ: ಕೆ.ಎಚ್. ಮುನಿಯಪ್ಪ

ಬೆಂಗಳೂರು,ಫೆ. 7,ಬರುವ 2024ರೊಳಗೆ ಕೋಲಾರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಆರಂಭಿಸುವುದಾಗಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ವಾಗ್ದಾನ ನೀಡಿದ್ದು, ಕೇಂದ್ರ ಸರ್ಕಾರ  ತನ್ನ ಭರವಸೆ ಈಡೇರಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಒತ್ತಾಯಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಕೂಡ ಕೋಚ್ ಫ್ಯಾಕ್ಟರಿ ಸ್ಥಾಪನೆಗೆ ಅಗತ್ಯ ನೆರವು ನೀಡಿದ್ದರು. ಸದಾನಂದಗೌಡರು ಹಾಗೂ ದಿವಂಗತ ಅನಂತಕುಮಾರ್ ಬೆನ್ನೆಲುಬಾಗಿ ನಿಂತಿದ್ದರು. ವರ್ಕ್ ಶಾಪ್ ಶುರು ಮಾಡಿ ಬಳಿಕ ಕೋಚ್ ಫ್ಯಾಕ್ಟರಿ ಮಾಡೋಣ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಕೂಡ ಭರವಸೆ ಕೊಟ್ಟಿದ್ದಾರೆ ಎಂದರು. 

ಕೋಚ್ ಫ್ಯಾಕ್ಟರಿ ಸ್ಥಾಪ‌ನೆಯಿಂದ ಐದು ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದ್ದು, ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕಾರ್ಖಾನೆಗೆ ಸ್ಥಾಪನೆಗೆ ಮಂಜೂರಾತಿ ನೀಡಲಾಗಿತ್ತು. ಇದೀಗ ಅವರೇ ಮುಖ್ಯಮಂತ್ರಿ ಆಗಿದ್ದಾರೆ. ಇಲ್ಲಿನ ಜನರ ಕನಸನ್ನು ನನಸು ಮಾಡಬೇಕು ಎಂದರು. ಕೋಚ್ ಫ್ಯಾಕ್ಟರಿ ಆರಂಭಕ್ಕೆ ಸಿದ್ದರಾಮಯ್ಯ ಕಾಲದಲ್ಲಿ ಪಿಯೋಷ್ ಗೋಯಲ್ ಗೆ ಪತ್ರ ಬರೆದಿದ್ದರು. ಬಳಿಕ ಈ ಯೋಜನೆ ಕೈ ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಮತ್ತು ಗೋಯಲ್ ಇಬ್ಬರು ಒಪ್ಪಿಕೊಂಡಿದ್ದರು. ತಕ್ಷಣ ಕೆಲಸ ಶುರು ಮಾಡಿ ರಾಜ್ಯ ಸರ್ಕಾರ ಕೊಡಬೇಕಾದ ಎಲ್ಲ ರೀತಿಯ ಸಹಕಾರ ಕೊಡುವುದಾಗಿ ಕುಮಾರಸ್ವಾಮಿ ಹೇಳಿದ್ದರು‌. ಬಳಿಕ ಚುನಾವಣೆ ಬಂದಿದ್ದರಿಂದ ಇದು ತಡವಾಯಿತು. ಹಂತ ಹಂತವಾಗಿ ಯೋಜನೆ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಮುನಿಯಪ್ಪ ಆಶಯ ವ್ಯಕ್ತಪಡಿಸಿದರು.