ರಾಯಚೂರು: 1 ಕೋಟಿ ರೂ. ವೆಚ್ಚದ ಆರ್‌ಟಿ-ಪಿಸಿಆರ್ ಪ್ರಯೋಗಾಲಯ ಕಾರ್ಯಾರಂಭ

ರಾಯಚೂರು, ಮೇ 31, ನಗರದ ರಿಮ್ಸ್ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸುಮಾರು 1 ಕೋಟಿ ರೂ.ಗಳ  ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಕೋವಿಡ್ ಆರ್‌ಟಿ-ಪಿಸಿಆರ್ ಪ್ರಯೋಗಾಲಯ ಭಾನುವಾರದಿಂದ ಕಾರ್ಯಾರಂಭ ಮಾಡಲಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ  ಕುಮಾರ್  ತಿಳಿಸಿದರು. ಅವರು ಮೇ 31ರ ಭಾನುವಾರ ನಗರದ  ರಿಮ್ಸ್ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸ್ಥಾಪಿಸಿರುವ ಕೋವಿಡ್  ಪ್ರಯೋಗಾಲಯವನ್ನು ಪರಿಶೀಲಿಸಿದ ನಂತರ, ಈ ಲ್ಯಾಬ್ ಇಂದಿನಿಂದ ಕಾರ್ಯಾರಂಭ ಮಾಡಲಿದೆ,  ಮೇ 31ರ ಭಾನುವಾರ 96 ಸ್ಯಾಂಪಲ್‌ಗಳನ್ನು ಪರೀಕ್ಷೆ ಮಾಡಲಾಗಿದ್ದು ಸಂಜೆ ವರದಿ ಬರಲಿದೆ. 

ಆರ್.ಟಿ.ಪಿ.ಸಿ.ಆರ್ ನಲ್ಲಿ ಟ್ಯೂನ್ಯಾಟ್ ಯಂತ್ರವನ್ನು ಅಳವಡಿಸಲಾಗಿದೆ. ಮೂರು ಪಾಳೆ  ಪ್ರಕಾರ ಸ್ಯಾಂಪಲ್ ಪರೀಕ್ಷೆ ಮಾಡಲಾಗುತ್ತದೆ. ಇದೂವರೆಗೂ ಹೊರರಾಜ್ಯಗಳಿಂದ ಜಿಲ್ಲೆಗೆ  ಬಂದ 11,300 ಸ್ಯಾಂಪಲ್‌ಗಳ ವರದಿ ಬಂದಿದೆ. ಅವರ 3000 ಸ್ಯಾಂಪಲ್‌ಗಳ ವರದಿ ಬಾಕಿಯಿದೆ,  ಅವೆಲ್ಲವೂ ಬೆಂಗಳೂರಿನ ಲ್ಯಾನ್‌ನಲ್ಲಿದೆ ಎಂದರು. ಸೋಂಕಿತರ  ಜೊತೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರ ಹಾಗೂ ಚೆಕ್‌ಪೋಸ್ಟ್‌ನಲ್ಲಿ  ಕಾರ್ಯನಿರ್ವಹಿಸುತ್ತಿರುವ ಪೊಲೀಸರು, ಆರೋಗ್ಯ ಇಲಾಖೆಯವರು ಹಾಗೂ ಇತರೆ  ಅಧಿಕಾರಿಗಳಗೆನಾದರೂ ಸೋಂಕು ಹರಡಿದ ಬಗ್ಗೆ ಶಂಕೆ ವ್ಯಕ್ತವಾದಲ್ಲಿ ಅವರ ಪರೀಕ್ಷೆಯನ್ನು  ಇಲ್ಲಿ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಮತ್ತು ರಿಮ್ಸ್ ಡೀನ್ ಡಾ.ಬಸವರಾಜ್ ಪೀರಾಪುರ ಇದ್ದರು.