ನವದೆಹಲಿ, ಮೇ 20,ಟೀಮ್ ಇಂಡಿಯಾ ಪರ ಟೆಸ್ಟ್ ಪಂದ್ಯ ಆಡಿದ ಅತಿ ಕಿರಿಯ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮನ್ ಎನಿಸಿರುವ ಪಾರ್ಥಿವ್ ಪಟೇಲ್, ಸೀಮಿತ ಓವರ್ ಗಳಲ್ಲಿ ಕೆ.ಎಲ್. ರಾಹುಲ್ ಮತ್ತು ರಿಷಭ್ ಪಂತ್ ನಡುವಿನ ಆಯ್ಕೆ ಕುರಿತು ಕೇಳಿದ ಪ್ರಶ್ನೆಗೆ ತಮ್ಮಲ್ಲಿದ್ದ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.ಇತ್ತೀಚಿನ ಸಂಚಿಕೆ ' ಲಾಕ್ ಡೌನ್ ಬಟ್ ನಾಟ್ ಔಟ್ ' ಸರಣಿಯಲ್ಲಿ ಮಾತನಾಡಿರುವ 2002ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಪಾರ್ಥಿವ್ ಪಟೇಲ್, ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಭಾರತ ತಂಡದಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲು ಮೊದಲ ಆಯ್ಕೆಯ ಕುರಿತು ಪ್ರಶ್ನಿಸಿದಾಗ ತಮ್ಮ ಮನಸ್ಸಿನ ಅಂತಃರಾಳವನ್ನು ಬಹಿರಂಗಪಡಿಸಿದ್ದಾರೆ.
'' ಪ್ರಸ್ತುತ ಸಮಯದಲ್ಲಿ ಕೆ.ಎಲ್. ರಾಹುಲ್ ಅಲ್ಪಾವಧಿ ಪರಿಹಾರ. ನೀವು ವಿಶ್ವಕಪ್ ಬಗ್ಗೆ ಯೋಚಿಸುತ್ತಿದ್ದರೆ ರಾಹುಲ್ ನಿಮ್ಮ ತಾತ್ಕಾಲಿಕ ಪರಿಹಾರವಷ್ಟೇ ಎಂದು ನಾನು ಭಾವಿಸುತ್ತೇನೆ. ವಿಶ್ವಕಪ್ ಸಮಯದಲ್ಲಿ ರಾಹುಲ್ ಭಾರತದ ಪರ ಕೀಪಿಂಗ್ ಹೊಣೆಗಾರಿಕೆಯನ್ನು ಉತ್ತಮವಾಗಿ ನಿರ್ವಹಿಸಬಲ್ಲರು, ಇದರಲ್ಲಿ ಯಾವುದೇ ಸಂದೇಹವಿಲ್ಲ, '' ಎಂದು ಪಾರ್ಥಿವ್ ಹೇಳಿದ್ದಾರೆ.'' ಆದರೆ ರಿಷಭ್ ಪಂತ್ ಅವರಲ್ಲಿ ನಿಜವಾಗಿಯೂ ಕೀಪಿಂಗ್ ಸಾಮರ್ಥ್ಯವಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ನಾನು ರಿಷಭ್ ನನ್ನು ಭೇಟಿಯಾದಾಗಲೆಲ್ಲಾ ಇದನ್ನೇ ಹೇಳಿದ್ದೇನೆ. ನಿಮ್ಮಲ್ಲಿ ಪ್ರತಿಭೆ ಇರುವ ಕಾರಣಕ್ಕಾಗಿಯೇ ಜನರು ಮಾತನಾಡುತ್ತಿದ್ದಾರೆ. ನಿಮ್ಮಲ್ಲಿ ಯಾವುದೇ ಪ್ರತಿಭೆ ಇಲ್ಲದಿದ್ದರೆ ಮತ್ತು ನೀವು ಪ್ರತಿಭಾವಂತರಾಗಿರದಿದ್ದರೆ ಜನರು ನಿಮ್ಮ ಬಗ್ಗೆ ಮಾತನಾಡುತ್ತಿರಲಿಲ್ಲ. ಆದ್ದರಿಂದ ಅದನ್ನು ನೆನಪಿನಲ್ಲಿಡಿ. ಕಳೆದು ಹೋದ ಲಯವನ್ನು ಮರಳಿ ಪಡೆಯಬೇಕಾದರೆ ನೀವು ದೇಶೀಯ ಕ್ರಿಕೆಟ್‌ಗೆ ಹಿಂತಿರುಗಬೇಕು ಮತ್ತು ಆ ಲಯವನ್ನು ಮರಳಿ ಪಡೆಯಬೇಕು. ನಿನ್ನ ಜಾಗದಲ್ಲಿ ನಾನಿದ್ದರೂ ಒಂದೆರೆಡು ವರ್ಷ ದೇಶಿಯ ಕ್ರಿಕೆಟ್ ಆಡಿ ಫಾರ್ಮ ಕಂಡುಕೊಳ್ಳುತ್ತಿದ್ದೆ ಎಂದು ತಿಳಿ ಹೇಳಿದ್ದೇನೆ, "ಎಂದು ಅವರು ವಿವರಿಸಿದ್ದಾರೆ.