ಬೆಂಗಳೂರು, ಆ 12 ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ರಾಜ್ಯಕ್ಕೆ ಆಗಮಿಸಲಿದ್ದು, ಕೃಷ್ಣಾ ನದಿ ಪ್ರವಾಹದಲ್ಲಿ ಸಂತ್ರಸ್ತ ಜನರನ್ನು ಭೇಟಿ ಮಾಡಿ ಸಾಂತ್ವನ ಹೇಳಲಿದ್ದಾರೆ.
ಕೇರಳದ ವಯನಾಡಿನಲ್ಲಿರುವ ರಾಹುಲ್ ಗಾಂಧಿ ಮಂಗಳವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ. ಕೃಷ್ಣ ನದಿ ಪ್ರವಾಹದಲ್ಲಿ ಸಂತ್ರಸ್ಥರಾದ ಜನರನ್ನು ಬೇಟಿಯಾಗಿ ಸಾಂತ್ವನ ಹೇಳಲಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ರಾಮದುರ್ಗ, ರಾಯಭಾಗಕ್ಕೆ ಪ್ರದೇಶಕ್ಕೆ ಭೇಟಿ ನೀಡಲಿದ್ದು ನೆರೆ ಸಂತ್ರಸ್ಥರಿಗೆ ಕಲ್ಪಿಸಿರುವ ಪುನರ್ವಸತಿ ಕೇಂದ್ರಗಳಿಗೂ ಇದೇ ವೇಳೆ ಭೇಟಿ ನೀಡಲಿದ್ದಾರೆ.
ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಾಜ್ಯದ ಬೆಳಗಾವಿ ಜಿಲ್ಲೆ ಸಂಪೂರ್ಣ ತತ್ತರಿಸಿದ್ದು, ಲಕ್ಷಾಂತರ ಜನರನ್ನು ರಕ್ಷಿಸಿ ಪುನರ್ವಸತಿ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 12 ಜನರು ಸಾವನ್ನಪ್ಪಿದ್ದು ಸಾವಿರಾರು ಜನರು ಮನೆ ಕಳೆದುಕೊಂಡಿದ್ದಾರೆ. ಲಕ್ಷಾಂತರ ರೈತರು ತಮ್ಮ ಬೆಳೆ, ಆಸ್ತಿ, ಜಾನುವಾರು ಕಳೆದುಕೊಂಡು ಬೀದಿಗಿ ಬಿದ್ದಿದ್ದಾರೆ.
ರಾಹುಲ್ ಗಾಂಧಿ ರಾಜ್ಯ ಭೇಟಿ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಡಿ ಕೆ ಶಿವಕುಮಾರ್, ಎಚ್ ಕೆ ಪಾಟೀಲ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಉಪಸ್ಥಿತರಿಲಿದ್ದಾರೆ.
ಇದೇ ವೇಳೆ ಮೃತರ ಕುಟುಂಬಗಳಿಗೆ ಕಾಂಗ್ರೆಸ್ ಪಕ್ಷದಿಂದ ಸಹಾಯಧನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ನಿರಾಶ್ರಿತರಿಗೆ ಅಗತ್ಯ ವಸ್ತುಗಳನ್ನು ಇದೇ ವೇಳೆ ರಾಹುಲ್ ಗಾಂಧಿ ಮೂಲಕ ವಿತರಣೆ ಮಾಡುವ ಯೋಜನೆಯೂ ಕಾಂಗ್ರೆಸ್ ನಾಯಕರಿಗೆ ಇದೆ ಎನ್ನಲಾಗಿದೆ.