ಎನ್‍ಪಿಆರ್ ಕುರಿತು ಮೋದಿ ಸರ್ಕಾರದ ವಿರುದ್ಧ ರಾಹುಲ್, ಚಿದಂಬರಂ ವಾಗ್ದಾಳಿ: ಬಿಜೆಪಿ ತರಾಟೆ

ನವದೆಹಲಿ, ಡಿ 26, ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಕುರಿತಂತೆ ಮೋದಿ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪಿ ಚಿದಂಬರಂ ಅವರ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿರುವ ಬಿಜೆಪಿ, ವಿದೇಶಗಳಲ್ಲಿ ಅಕ್ರಮ ವಲಸಿಗರನ್ನು ಹೇಗೆ ನಡೆಸಿಕೊಳ್ಳುತ್ತಾರೆಂಬುದನ್ನು ಸ್ವತ: ತಿಳಿಯಲು ರಾಹುಲ್ ಗಾಂಧಿ ಒಮ್ಮೆ ಅವಧಿ ಮೀರಿ ಯಾವುದಾದರೂ ದೇಶವೊಂದರಲ್ಲಿ ಉಳಿಯಲಿ ಎಂದು ಸವಾಲು ಹಾಕಿದೆ. ‘ರಾಹುಲ್ ಗಾಂಧಿ ಅವರು ಆಗಾಗ್ಗೆ ವಿದೇಶಕ್ಕೆ ತೆರಳುತ್ತಾರೆ. ಒಮ್ಮೆ ಅವರು ವೀಸಾ ಅವಧಿ ಮುಗಿದು ಹೆಚ್ಚಿನ ಕಾಲ ಅಲ್ಲೇ ಉಳಿಯಬೇಕು. ಗಡೀಪಾರು ಮಾಡುವ ಮುನ್ನ ಅಲ್ಲಿನ ಕೂಡಿಹಾಕುವ ಕೇಂದ್ರಕ್ಕೆ ತಳ್ಳಬೇಕು. ಆಗ ಅವರಿಗೆ ಬೇರೆ ದೇಶಗಳಲ್ಲಿ ಅಕ್ರಮ ವಲಸಿಗರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ.’ ಎಂಬುದು ಅರ್ಥವಾಗುತ್ತದೆ ಎಂದು ಬಿಜಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ತಿಳಿಸಿದ್ದಾರೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‍ಪಿಆರ್) ಕುರಿತಂತೆ ಚಿದಂಬರಂ ನೀಡಿರುವ ಹೇಳಿಕೆಯನ್ನು ಮಾಳವೀಯ ಟೀಕಿಸಿದ್ದಾರೆ. 2012ರಲ್ಲಿ ಚಿದಂಬರಂ ಪ್ರಸ್ತಾಪಿಸಿದ್ದ ಅಂಶಗಳಿರುವ ವಿಡೀಯೋವನ್ನು ಅವರು ಉಲ್ಲೇಖಿಸಿದ್ದಾರೆ. ‘ ದೇಶದ ನಿವಾಸಿಗಳಿಗೆ ಕಾರ್ಡ್ ನೀಡುವುದು ಎನ್ ಪಿ ಆರ್ ಪ್ರಕ್ರಿಯೆಯ ಉದ್ದೇಶವಾಗಿದೆ. ಈ ಪ್ರಕ್ರಿಯೆಯು ಪೌರತ್ವ ಕಾರ್ಡ್ ಒದಗಿಸಲಿದೆ.’ ಎಂದು ಸ್ವತ: ಚಿದಂಬರಂ ಹೇಳಿದ್ದಾರೆ ಎಂದು ಮಾಳವೀಯ ಟೀಕಿಸಿದ್ದಾರೆ.  ‘ವಾಸ್ತವವಾಗಿ ಪೌರತ್ವದಿಂದ ಎನ್‍ಪಿ ಆರ್ ಅನ್ನು  ತೆಗೆದುಹಾಕಿದ್ದು ಎನ್‍ಡಿಎ ಸರ್ಕಾರ’ ಎಂದು ಮಾಳವೀಯ ಹೇಳಿದ್ದಾರೆ.