ರಹಾನೆ ಶತಕದ ಸೊಬಗು, ಬುಮ್ರಾ ಮಾರಕ ದಾಳಿ : ಭಾರತಕ್ಕೆ ವೆಸ್ಟ್ ಇಂಡೀಸ್ ವಿರುದ್ಧ ದಾಖಲೆಯ ಜಯ

ನಾಥರ್್ ಸೌಂಡ್, ಆ 26      ಕೆರಿಬಿಯನ್ ಪ್ರವಾಸದಲ್ಲಿರುವ ಭಾರತ ತಂಡ ಮೊದಲನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇನ್ನೂ ಒಂದು ದಿನ ಬಾಕಿ ಇರುವಾಗಲೇ ಭರ್ಜರಿ ಜಯ ಸಾಧಿಸಿತು.  

ಜಸ್ಪ್ರಿತ್ ಬುಮ್ರಾ ( 7 ಕ್ಕೆ 5) ಹಾಗೂ ಇಶಾಂತ್ ಶರ್ಮಾ (31 ಕ್ಕೆ3) ಅವರ ಮಾರಕ ದಾಳಿಗೆ ನಲುಗಿದ ಆತಿಥೇಯ ವೆಸ್ಟ್ ಇಂಡೀಸ್ 318 ರನ್ ಗಳಿಂದ ಮೊದಲನೇ ಪಂದ್ಯದಲ್ಲಿ ಭಾರತದ ವಿರುದ್ಧ ಹೀನಾಯ ಸೋಲು ಅನುಭವಿಸಿತು. ಇದು ಭಾರತದ ಪಾಲಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ನಾಲ್ಕನೇ ಅತಿ ದೊಡ್ಡ ಜಯ. ಗೆಲುವಿನೊಂದಿಗೆ ಕೊಹ್ಲಿ ಪಡೆ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಜತೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲ ಪಂದ್ಯದಲ್ಲಿ ಭಾರತ 60 ಅಂಕಗಳನ್ನು ತನ್ನ ಖಾತೆಗೆ ಜಮೆ ಮಾಡಿಕೊಂಡಿತು. 

ಅದೇ ರಾಗ ಅದೇ ತಾಳ:  

ಭಾನುವಾರ ಭಾರತ ನೀಡಿದ್ದ 409 ರನ್ ಗುರಿ ಹಿಂಬಾಲಿಸಿದ ವೆಸ್ಟ್ ಇಂಡೀಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಮತ್ತೆ ಅದೇ ರಾಗ-ಅದೇ ತಾಳ ಎಂಬಂತೆ ಭಾರತದ ವೇಗಿಗಳ ಎದುರು ನಿಲ್ಲುವಲ್ಲಿ ವಿಫಲರಾದರು. ಒಬ್ಬರ ಹಿಂದೆ ಮತ್ತೊಬ್ಬರು ಪೈಪೋಟಿ ನೀಡುವಂತೆ ಪೆವಿಲಿಯನ್ಗೆ ಪೆರೇಡ್ ನಡೆಸಿದರು.  

ಮಾರಕ ದಾಳಿ ನಡೆಸಿದ ಜಸ್ಪ್ರಿತ್ ಬುಮ್ರಾ, ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 100 ರನ್ಗಳಿಗೆ ಆಲೌಟ್ ಮಾಡಿದರು. ಬುಮ್ರಾ 5, ಇಶಾಂತ್ 3 ಹಾಗೂ ಶಮಿ ಎರಡು ವಿಕೆಟ್ ಹಂಚಿಕೊಂಡರು. 

ಭೇಷ್ ಕೇಮರ್ ರೋಚ್:  

ಭಾರತದ ಮಾರಕ ದಾಳಿಗೆ ವೆಸ್ಟ್ ಇಂಡೀಸ್ನ ಕ್ರೈಗ್ ಬ್ರಾಥ್ವೇಟ್ (1), ಜಾನ್ ಕ್ಯಾಂಪ್ಬೆಲ್(7), ಶಮರಾಹ್ ಬ್ರೂಕ್ಸ್ (2), ಡೆರೆನ್ ಬ್ರಾವೊ (2), ಶಿಮ್ರಾನ್ ಹೆಟ್ಮೇರ್ (1), ರೋಸ್ಟನ್ ಚೇಸ್(12) ಶಾಯ್ ಹೋಪ್(2) ಹಾಗೂ ಜೇಸನ್ ಹೋಲ್ಡರ್ (8) ಅವರು ಬಹುಬೇಗ ವಿಕೆಟ್ ಒಪ್ಪಿಸಿದರು. ಆದರೆ, ವಿಂಡೀಸ್ ಪರ ರೋಸ್ಟನ್ , ಮಿಗ್ಯೂಲ್ ಕಮಿನ್ಸ್ ಹಾಗೂ ಕೇಮರ್ ರೋಚ್ ಎರಡಂಕಿ ದಾಟಿದ ಬ್ಯಾಟ್ಸ್ಮನ್ಗಳಾಗಿದ್ದಾರೆ. ಇದರಲ್ಲಿ ವೇಗಿ ಕೇಮರ್ ರೋಚ್ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. 31 ಎಸೆತಗಳನ್ನು ಆಡಿದ ಅವರು ಐದು ಸಿಕ್ಸರ್ ಹಾಗೂ ಒಂದು ಬೌಂಡರಿಯೊಂದಿಗೆ 38 ರನ್ ಗಳಿಸಿ ಕೆಲಕಾಲ ರಂಜಿಸಿದರು. ಆದರೆ, ಇವರನ್ನು ಇಶಾಂತ್ ಶರ್ಮಾ  ಕೆಡವಿದರು.  

ಬುಮ್ರಾ ಮತ್ತೊಂದು ದಾಖಲೆ:  

ದ್ವಿತೀಯ ಇನಿಂಗ್ಸ್ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 100 ರನ್ ಕಟ್ಟಿಹಾಕುವಲ್ಲಿ ಪ್ರದಾನ ಪಾತ್ರವಹಿಸಿದ್ದು ವೇಗಿ ಜಸ್ಪ್ರಿತ್ ಬುಮ್ರಾ ಎಂಟು ಓವರ್ ಬೌಲಿಂಗ್ ಮಾಡಿ ಕೇವಲ 7 ರನ್ ನೀಡಿ ಐದು ವಿಕೆಟ್ ಗೊಂಚಲು ಪಡೆದರು. ಆ ಮೂಲಕ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಐದು ವಿಕೆಟ್ ಗೊಂಚಲು ಪಡೆದು ಏಷ್ಯಾದ ಮೊದಲ ಬೌಲರ್ ಎಂಬ ಸಾಧನೆ ಮಾಡಿದರು. ಬುಮ್ರಾ ಈ ಸಾಧನೆ ಮಾಡಲು ಕೇವಲ 11 ಟೆಸ್ಟ್ ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ.  

  ಇದಕ್ಕೂ ಮೊದಲು ಮೂರು ವಿಕೆಟ್ ಕಳೆದುಕೊಂಡು 185 ರನ್ ಗಳಿಂದ ದ್ವಿತೀಯ ಇನಿಂಗ್ಸ್ಆರಂಭಿಸಿದ ಭಾರತ ತಂಡ ಆರಂಭದಲ್ಲೇ ನಾಯಕ ವಿರಾಟ್ ಕೊಹ್ಲಿ (51 ರನ್) ಅವರನ್ನು ಕಳೆದುಕೊಂಡಿತು.  

ರಹಾನೆ-ವಿಹಾರಿ ಜುಗಲ್ಬಂದಿ: ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದ ಬಳಿಕ ಜತೆಯಾದ ಅಜಿಂಕ್ಯಾ ರಹಾನೆ ಹಾಗೂ ಹನುಮ ವಿಹಾರಿ ಜೋಡಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿತು. ವೆಸ್ಟ್ ಇಂಡೀಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಮಧ್ಯಮ ಕ್ರಮಾಂಕದಲ್ಲಿ ನಾವು ಬಲಶಾಲಿಗಳು ಎಂದು ಸಮರ್ಥಿಸಿಕೊಂಡಿತು. ಈ ಜೋಡಿಯು ಮುರಿಯದ ಐದನೇ ವಿಕೆಟ್ಗೆ 135 ರನ್ ಜತೆಯಾಟದ ಕಾಣಿಕೆ ತಂಡಕ್ಕೆ ನೀಡಿತು.  

ಅಜಿಂಕ್ಯಾ ರಹಾನೆ ಪ್ರೀತಿಯ ಶತಕ:  

ಮೊದಲ ಇನಿಂಗ್ಸ್ನಲ್ಲೂ 81 ರನ್ ಗಳಿಸಿ ತಂಡಕ್ಕೆ ಆಧಾರವಾಗಿದ್ದ ಉಪ ನಾಯಕ ಅಜಿಂಕ್ಯಾ ರಹಾನೆ ಎರಡನೇ ಇನಿಂಗ್ಸ್ನಲ್ಲೂ ತಮ್ಮ ಸೊಗಸಾದ ಬ್ಯಾಟಿಂಗ್  ಮುಂದುವರಿಸಿದರು. ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕದೆ ಇವರು ಬಹಳ ಎಚ್ಚರಿಕೆಯಿಂದ ವಿಂಡೀಸ್ ಬೌಲರ್ಗಳನ್ನು ಎದುರಿಸಿದರು. 242 ಎಸೆತಗಳಲ್ಲಿ ಐದು ಬೌಂಡರಿಯೊಂದಿಗೆ 102 ರನ್ ದಾಖಲಿಸಿದರು. ಕಳೆದ ಎರಡು ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ರಹಾನೆಯ ಮೊದಲ ಶತಕ ಇದಾಯಿತು. ಈ ಮೂಲಕ ವೃತ್ತಿ ಜೀವನದಲ್ಲಿ 10ನೇ ಶತಕ ತನ್ನ ಖಾತೆಗೆ ಸೇರಿಸಿಕೊಂಡರು. ಬಳಿಕ ಶನ್ನೋನ್ ಗ್ಯಾಬ್ರಿಯಲ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.  

ಶತಕ ವಂಚಿತ ಹನುಮ:  

ಅಜಿಂಕ್ಯಾ ರಹಾನೆ ಜತೆ ಅಮೋಘ ಜತೆಯಾಟವಾಡಿದ್ದ ಹನುಮ ವಿಹಾರಿ ಕೂಡ ಅದ್ಭುತ ಬ್ಯಾಟಿಂಗ್ ಮಾಡುವಲ್ಲಿ ಯಶಸ್ವಿಯಾದರು. 128 ಎಸೆತಗಳನ್ನು ಎದುರಿಸಿದ ಅವರು ಒಂದು ಸಿಕ್ಸ್ ಹಾಗೂ 10 ಬೌಂಡರಿಯೊಂದಿಗೆ 93 ರನ್ ಗಳಿಸಿದರು. ಶತಕದಂಚಿನಲ್ಲಿ ಇದ್ದ ಇವರನ್ನು ಜೇಸನ್ ಹೋಲ್ಡರ್ ಅವರು ಔಟ್ ಮಾಡಿದರು. ಇದರೊಂದಿಗೆ ಕೇವಲ ಏಳು ರನ್ಗಳಿಂದ ಶತಕ ವಂಚಿತರಾಗಿ ವಿಹಾರಿ ನಿರಾಸೆಯಿಂದ ಪೆವಿಲಿಯನ್ಗೆ ಹೆಜ್ಜೆ ಹಾಕಿದರು. 

ವೆಸ್ಟ್ ಇಂಡೀಸ್ ಪರ ರೋಸ್ಟನ್ ಚೇಸ್ ನಾಲ್ಕು ವಿಕೆಟ್ ಪಡೆದರು. 

ಸಂಕ್ಷಿಪ್ತ ಸ್ಕೋರ್  

ಭಾರತ 

ಪ್ರಥಮ ಇನಿಂಗ್ಸ್: 297 

ದ್ವಿತೀಯ ಇನಿಂಗ್ಸ್: 112.3 ಓವರ್ಗಳಲ್ಲಿ 343/7 (ಅಜಿಂಕ್ಯಾ ರಹಾನೆ  102, ಹನುಮ ವಿಹಾರಿ 93; ರೋಸ್ಟನ್ ಚೇಸ್ 132 ಕ್ಕೆ 4, ಜೇಸನ್ ಹೋಲ್ಡರ್ 45 ಕ್ಕೆ 1, ಕೇಮರ್ ರೋಚ್ 29 ಕ್ಕೆ 1, ಶನ್ನೋನ್ ಗ್ಯಾಬ್ರಿಯಲ್ 63 ಕ್ಕೆ 1) 

ವೆಸ್ಟ್ ಇಂಡೀಸ್  

ಪ್ರಥಮ ಇನಿಂಗ್ಸ್: 222 

ದ್ವಿತೀಯ ಇನಿಂಗ್ಸ್: 26.5 ಓವರ್ಗಳಲ್ಲಿ 100/10 (ಕೇಮರ್ ರೋಚ್ 38, ಮಿಗ್ಯೂಲ್ ಕಮಿನ್ಸ್ ಅಜೇಯ 19; ಜಸ್ಪ್ರಿತ್ ಬುಮ್ರಾ 7 ಕ್ಕೆ 5, ಇಶಾಂತ್ ಶಮರ್ಾ 31 ಕ್ಕೆ 3, ಮೊಹಮ್ಮದ್ ಶಮಿ 13 ಕ್ಕೆ 2)