ರಫೇಲ್ ಪ್ರಕರಣ: ಹೊಸ ತನಿಖೆಯಿಲ್ಲ, ಮೇಲ್ಮನವಿ ವಜಾಗೊಳಿಸಿದ ಸುಪ್ರೀಂಕೋರ್ಟ್

ನವದೆಹಲಿ, ನ14  :     ರಫೇಲ್ ಸಮರ ವಿಮಾನ ಖರೀದಿ ಪ್ರಕರಣದಲ್ಲಿ ಸರ್ಕಾರಕ್ಕೆ ನೀಡಿದ್ದ ಕ್ಲೀನ್ ಚಿಟ್ ಪ್ರಶ್ನಿಸಿ ಸಲ್ಲಿಕೆಯಾಗಿದ್ದ    ಮರುಪರಿಶೀಲನಾ ಅರ್ಜಿಗಳನ್ನು  ಸುಪ್ರೀಂಕೋರ್ಟ್ ಗುರುವಾರ ತಿರಸ್ಕರಿಸಿದ್ದು,  ಈ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಗ್ ರಿಲೀಫ್ ದೊರಕಿದಂತಾಗಿದೆ .   

ಈ ಪ್ರಕರಣದಲ್ಲಿ ಹೊಸದಾಗಿ ತನಿಖೆ ನಡೆಸಲು ಆದೇಶ ಹೊರಡಿಸುವ ಪೂರಕ ಅಂಶಗಳೇ ಕಾಣುತ್ತಿಲ್ಲ  ಹೀಗಾಗಿ  ಪುನರ್ ಪರಿಶಿಲನಾ ಅರ್ಜಿಗಳನ್ನು ವಜಾ ಮಾಡುತ್ತಿರುವುದಾಗಿ  ನ್ಯಾಯಪೀಠ ಹೇಳಿದೆ.

ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಈ ಮೊದಲು ಕ್ಲೀನ್ ಚಿಟ್ ನೀಡಿತ್ತು. ಆದರೆ ಇದರ ಬಗ್ಗೆ  ಮರುಪರಿಶೀಲನಾ ಅರ್ಜಿಯೂ  ಸಲ್ಲಿಕೆಯೂ  ಆಗಿತ್ತು.  ಇದರ ವಿಚಾರಣೆಯನ್ನು ಮೇ 10ರಂದು ಪೂರ್ಣಗೊಳಿಸಿದ್ದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿರುವುದನ್ನು ಮರುಪರಿಶೀಲಿಸಬೇಕು ಎಂದು ಕೇಂದ್ರದ ಮಾಜಿ ಸಚಿವರಾದ  ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ವಕೀಲ ಪ್ರಶಾಂತ್ ಭೂಷಣ್ ಕೋರ್ಟ್ ಮೊರೆ ಹೋಗಿದ್ದರು.   ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್, ಕೆ.ಎಂ.ಜೋಸೆಫ್ ಅವರಿದ್ದ ನ್ಯಾಯಪೀಠ ಇಂದು ಕಾಯ್ದಿರಿಸಿದ  ತೀರ್ಪನ್ನು ನೀಡಿದೆ.  

ರಫೇಲ್ ಖರೀದಿ ಒಪ್ಪಂದದಲ್ಲಿ ಅಕ್ರಮ ನಡೆದಿದ್ದು, ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ 2018ರ ಡಿಸೆಂಬರ್ 14ರಂದೇ ವಜಾಮಾಡಿತ್ತು.