ಶಿಲ್ಲಾಂಗ್, ಮಾರ್ಚ್ ೨೯, ಕೊರೊನಾವೈರಸ್ ಹೆಸರಿನಲ್ಲಿ ಈಶಾನ್ಯ ರಾಜ್ಯಗಳ ಜನರಿಗೆ ಕಿರುಕುಳ ನೀಡುವವರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಮನ್ ವೆಲ್ತ್ ಮಾನವ ಹಕ್ಕುಗಳ ಉಪಕ್ರಮ (ಸಿಎಚ್‌ಆರ್‌ಐ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದೆ ಎಂದು ಸಿಎಚ್‌ಆರ್‌ಐ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ತುರ್ತು ಹಾಟ್ಲೈನ್ ಹಾಗೂ ನೋಡಲ್ ವಿಭಾಗಗಳನ್ನು ಸ್ಥಾಪಿಸುವಂತೆ ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪ್ರತ್ಯೇಕ ಪತ್ರಬರೆದಿರುವ - ಸಿ ಎಚ್ ಆರ್ ಐ ಕೋವಿಡ್ -೧೯ ಹಿನ್ನಲೆಯಲ್ಲಿ ದೇಶಾದ್ಯಂತ ಈಶಾನ್ಯ ರಾಜ್ಯಗಳ ಜನರ ವಿರುದ್ದ ನಡೆಯುತ್ತಿರುವ ಜನಾಂಗೀಯ ಮತ್ತು ತಾರತಮ್ಯ ಕೃತ್ಯಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹವರ್ತಿಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಮನವಿ ಮಾಡಿದೆ.
ಕಳೆದ ಕೆಲವು ವಾರಗಳಿಂದ ದೇಶಾದ್ಯಂತ ಈಶಾನ್ಯ ರಾಜ್ಯಗಳ ಜನರನ್ನು ಗುರಿಯಾಗಿಸಿ ಜನಾಂಗೀಯ ದಾಳಿ, ದೈಹಿಕಹಲ್ಲೆ ಹಾಗೂ ನಿಂದನೆ ಘಟನೆಗಳು ನಡೆಯುತ್ತಿರುವುದು ನಿಮ್ಮ ಗಮನಕ್ಕೂ ಬಂದಿರಬಹುದು ಎಂದು ಕಾಮನ್ ವೆಲ್ತ್ ಮಾನವ ಹಕ್ಕುಗಳ ಉಪಕ್ರಮ ಅಧ್ಯಕ್ಷ ವಜಾಹತ್ ಹಬೀಬುಲ್ಲಾ ಹಾಗೂ ಅಂತರಾಷ್ಟ್ರೀಯ ನಿರ್ದೇಶಕ ಸಂಜಯ್ ಹಜಾರಿಕಾ ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ರೆಸ್ಟೋರೆಂಟ್‌ಗಳಿಂದ ಹೊರಗೆ ತಳ್ಳಿರುವ, ಥಳಿಸಿರುವ, ಬಹಿಷ್ಕಾರ ಬೆದರಿಕೆ ಹಾಕಿರುವ ಹಾಗೂ ಬಾಡಿಗೆ ಮನೆಗಳನ್ನು ಕೂಡಲೇ ಖಾಲಿ ಮಾಡುವಂತೆ ಕಿರುಕುಳ ನೀಡಲಾಗುತ್ತಿದೆ. ಅಹಮದಾಬಾದ್, ದೆಹಲಿ ಮತ್ತು ಕೋಲ್ಕತಾ ಸೇರಿದಂತೆ ದೇಶಾದ್ಯಂತ ಇಂತಹ ಪೂರ್ವಾಗ್ರಹ ಪೀಡಿತ ಕೃತ್ಯಗಳು ನಡೆಯುತ್ತಿವೆ. ಇಡೀ ದೇಶ ಒಗ್ಗೂಡಬೇಕಾದ ಸಂಕಷ್ಟದ ಸನ್ನಿವೇಶದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದು ಖಂಡನೀಯ ಎಂದು ಪತ್ರದಲ್ಲಿ ಹೇಳಿದ್ದಾರೆ.