ರಿಯಲ್ ಮ್ಯಾಡ್ರಿಡ್-ಎಫ್ಸಿ ಬಾರ್ಸಿಲೋನಾ ಪಂದ್ಯ ಕಣ್ತುಂಬಿಸಿಕೊಂಡ ರೋಹಿತ್ ಶರ್ಮಾ

ಮ್ಯಾಡ್ರಿಡ್, ಮಾ,3 ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಸ್ಪೇನ್ನಲ್ಲಿ ನಡೆದಿದ್ದ ಎಫ್ಸಿ ಬಾರ್ಸಿಲೋನಾ ಹಾಗೂ ರಿಯಲ್ ಮ್ಯಾಡ್ರಿಡ್ ನಡುವಿನ ಎಲ್ ಕ್ಲಾಸಿಕೊ ಫುಟ್ಬಾಲ್ ಪಂದ್ಯವನ್ನು ಕಣ್ತುಂಬಿಸಿಕೊಂಡಿದ್ದಾರೆ. ಲಾ ಲೀಗಾ ಭಾರತದ ರಾಯಭಾರಿಯೂ ಆಗಿರುವ ರೋಹಿತ್ ಶರ್ಮಾ, ಭಾನುವಾರ ತಡರಾತ್ರಿ ನಡೆದಿದ್ದ ರಿಯಲ್ ಮ್ಯಾಡ್ರಿಡ್ ಹಾಗೂ ಎಫ್ಸಿ ಬಾರ್ಸಿಲೋನಾ ತಂಡಗಳ ನಡುವಿನ ಪಂದ್ಯವನ್ನು ವೀಕ್ಷಿಸಿದ್ದರು. ಇದಕ್ಕೂ ಮುನ್ನ ಅವರು ಪ್ಯಾಲಾಸಿಯೊ ರಿಯಲ್ಗೆ ಭೇಟಿ ನೀಡಿ ತಮ್ಮ ಸುಂದರ ಸಮಯವನ್ನು ಕಳೆದಿದ್ದರು. ಸುಮಾರು 81,000 ಫುಟ್ಬಾಲ್ ಅಭಿಮಾನಿಗಳ ಸಮ್ಮುಖದಲ್ಲಿ ಲಾ ಲೀಗಾ ಟೂರ್ನಿಯ ಎರಡು ಬಲಿಷ್ಠ ತಂಡಗಳ ಕಾದಾಟವನ್ನು ವೀಕ್ಷಿಸುವ ಮೂಲಕ ರೋಹಿತ್ ಆಹ್ಲಾದಿಸಿದರು. ಈ ಹಿಂದೆ ರೋಹಿತ್ ಶರ್ಮಾ ರಿಯಲ್ ಮ್ಯಾಡ್ರಿಡ್ ತಂಡದ ದೊಡ್ಡ ಬೆಂಬಲಿಗ ಎಂದು ಹೇಳಿಕೊಂಡಿದ್ದರು. ಇದೀಗ ಝಿನೆಡಿನ್ ಝಿಡಾನೆ ಮಾರ್ಗದರ್ಶನದ ರಿಯಲ್ ಮ್ಯಾಡ್ರಿಡ್, ಬಲಿಷ್ಟ ಎಫ್ಸಿ ಬಾರ್ಸಿಲೋನಾ ತಂಡವನ್ನು 2-0 ಅಂತರದಲ್ಲಿ ಮಣಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.ಬ್ರೇಜಿಲ್ ಯುವ ಪ್ರತಿಭೆ ವಿನಿಶಿಯಸ್ 71 ನೇ ನಿಮಿಷದಲ್ಲಿ ಮ್ಯಾಡ್ರಿಡ್ಗೆ ಮೊದಲನೇ ಗೋಲು ತಂದುಕೊಟ್ಟರು. ಇದಾದ ಕೆಲವೇ ನಿಮಿಷಗಳಲ್ಲಿ ಬದಲಿ ಆಟಗಾರ ಮರಿಯಾನೊ ತಂಡಕ್ಕೆ ಎರಡನೇ ಗೋಲ ಕಾಣಿಕೆ ನೀಡಿದರು. ಪಂದ್ಯದ ನಂತರ ಎಲ್ ಕ್ಲಾಸಿಕೊ ಪಾರ್ಟಿಯಲ್ಲಿ ಹಲವು ಫುಟ್ಬಾಲ್ ದಂತಕತೆಗಳನ್ನುರೋಹಿತ್ ಭೇಟಿಯಾಗಿ ಟ್ವೀಟ್ ಮಾಡಿದ್ದು, "ಎಲ್ ಕ್ಲಾಸಿಕೊ ಪಾರ್ಟಿಯಲ್ಲಿ ಪಂದ್ಯದ ಕೆಲ ದಂತಕತೆಗಳನ್ನು ಭೇಟಿಯಾಗಿದ್ದು ಖುಷಿ ನೀಡಿತು," ಎಂದು ಫೋಟೊಗೆ ಶೀರ್ಷಿಕೆ ಬರೆದುಕೊಂಡಿದ್ದರು.ನ್ಯೂಜಿಲೆಂಡ್ ವಿರುದ್ಧ ಮೌಂಟ್ ಮೌಂಗನುಯ್ಯಲ್ಲಿ ಟಿ20 ಸರಣಿಯ ಐದನೇ ಪಂದ್ಯದ ವೇಳೆ ರೋಹಿತ್ ಶರ್ಮಾ, ಗಾಯಕ್ಕೆ ತುತ್ತಾಗಿದ್ದರು. ನಂತರ ಅವರು ಏಕದಿನ ಸರಣಿ ಹಾಗೂ ಟೆಸ್ಟ್ ಸರಣಿಗಳಿಂದ ಹೊರಗುಳಿಯಬೇಕಾಯಿತು. ಇದರ ಪರಿಣಾಮ ಭಾರತ 3-0 ಅಂತರದಲ್ಲಿ ಏಕದಿನ ಸರಣಿ ಹಾಗೂ 2-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ನ್ಯೂಜಿಲೆಂಡ್ ಎದುರು ವೈಟ್ವಾಶ್ ಮುಖಭಂಗ ಅನುಭವಿಸಿತು.