ರೌಡಿ ಶೀಟರ್ ಕೊಲೆ ಮಾಡಿದ್ದ ಆರು ಜನರ ಬಂಧನ

ಬೆಂಗಳೂರು, ಫೆ 15, ಕಾಟನ್ ಪೇಟೆಯ ರೌಡಿಶೀಟರ್ ಪ್ರಭಾಕರ ಅಲಿಯಾಸ್ ಸಕ್ಕರೆ ಅನ್ನು ಕೊಲೆ ಮಾಡಿದ್ದ ಆರು ಜನರನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ದೀಪಕ್ (22), ಶಿವಾ (28), ಅಜೇಯ (23), ವಿನೋದ್ (27), ಸುನೀಲ್ (22), ಶ್ರೀಮತಿ ಮಾಲ (43) ಬಂಧಿತ ಆರೋಪಿಗಳು.ಬಂಧಿತರಿಂದ ಕೃತ್ಯಕ್ಕೆ ಬಳಸಿದ ಒಂದು ಲಾಂಗು, ಮಚ್ಚು ಹಾಗೂ ಡ್ರಾಗರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೇ ತಿಂಗಳ 11ರಂದು ರಾತ್ರಿ 7.40ರ ಸುಮಾರಿಗೆ ರೌಡಿಶೀಟರ್ ಪ್ರಭಾಕರ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಮಾಡಲಾಗಿತ್ತು.ಪ್ರಕರಣದ ಜಾಡು ಹಿಡಿದ ಪೊಲೀಸರು ಹತ್ಯೆ ಮಾಡಿದ್ದ ಆರು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನನ್ನ ಅಕ್ಕ ದೀಪಾಳಿಗೆ ಕೊಲೆಯಾದ ಪ್ರಭಾಕರ್ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಅಲ್ಲದೇ, ನನ್ನ ತಾಯಿಗೆ ತಾವು ಹೊಸ ಮನೆ ಕಟ್ಟಿಸುತ್ತಿದ್ದು, ಆ ಮನೆ ಪೂರ್ಣಗೊಳ್ಳಲು ತನಗೆ ಹಣ ನೀಡಬೇಕು. ಇನ್ನು ಕೊಲೆ ಯತ್ನ ಪ್ರಕರಣದಲ್ಲಿ ತಾನು ಜೈಲು ಸೇರಿದ್ದಕ್ಕೆ ತಮ್ಮ  ಮಗ ದೀಪಕ್  ಕಾರಣವಾಗಿದ್ದರಿಂದ ತನಗೆ 40, 000ರೂ ಹಣ ನೀಡುವಂತೆ ಒತ್ತಾಯಿಸುತ್ತಿದ್ದ. ಇದರಿಂದ ರೋಸಿ ಹೋಗಿ ಕೊಲೆ ಮಾಡಿರುವುದಾಗಿ ಪ್ರಮುಖ ಆರೋಪಿ ದೀಪಕ್ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.ಚಿಕ್ಕಪೇಟೆ ಉಪವಿಭಾಗದ ಪೊಲೀಸ್ ಆಯುಕ್ತ ಮಹಂತ ರೆಡ್ಡಿ ಎ ಆರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.