ನವದೆಹಲಿ, ಫೆ 15: ರಾಮನ ಜೀವನಕ್ಕೆ ಸಂಬಂಧಿಸಿದ ರಾಮೇಶ್ವರಂ, ನಾಸಿಕ್, ಚಿತ್ರಕೂಟ, ಅಯೋಧ್ಯೆ ಪುರಾತನ ಮತ್ತು ಧಾರ್ಮಿಕ ಹಿನ್ನೆಲೆಯ ಸ್ಥಳಗಳನ್ನು ಸಂಪರ್ಕಿಸುವ ನವನವೀನ ರೂಪದ ರಾಮಾಯಣ ಎಕ್ಸ್ ಪ್ರೆಸ್ ರೈಲು ಮಾರ್ಚ್ ನಲ್ಲಿ ಸಂಚಾರ ಆರಂಭವಾಗಲಿದೆ. ಭಾರತೀಯ ರೈಲ್ವೆಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ) ಹೊಸ ರೂಪ ಮತ್ತು ಹೊಸ ಸ್ಪರ್ಶದೊಂದಿಗೆ ರಾಮಾಯಣ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಅಣಿಯಾಗುತ್ತಿದೆ.ದೆಹಲಿಯಲ್ಲಿಂದು ರಾಮಾಯಣದ ರೈಲು ಸಂಚಾರದ ಬಗ್ಗೆ ರೈಲ್ವೆ ಮಂಡಳಿಯ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಶನಿವಾರ ಮಾಹಿತಿ ನೀಡಿದರು. ಪ್ರವಾಸಿ ರಾಮಾಯಣ ಎಕ್ಸ್ಪ್ರೆಸ್ ರೈಲಿಗೆ ಹೊಸ ರೂಪ ನೀಡಲಾಗುತ್ತಿದೆ. ಈಗಾಗಲೇ ಕಳೆದ 2018ರ ನವೆಂಬರ್ ಈ ರೈಲು ಸೇವೆಗೆ ಚಾಲನೆ ನೀಡಲಾಗಿತ್ತು. ಈಗ ಆಧುನಿಕ ಸ್ಪರ್ಶ ಮತ್ತು ನಾವಿನ್ಯತೆಯೊಂದಿಗೆ ಮುಂದಿನ ತಿಂಗಳ ಅಂತ್ಯದ ವೇಳೆಗೆ ಸಂಚಾರಕ್ಕೆ ಸಿದ್ದವಾಗಲಿದೆ ಎಂದು ಅವರು ಹೇಳಿದರು.ಈ ರೈಲು ಒಟ್ಟಾರೆ 800 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ ಮತ್ತು ಟಿಕೆಟ್ಗಳ ಬೆಲೆ ಪ್ರತಿ ವ್ಯಕ್ತಿಗೆ 15,120 ರೂಪಾಯಿಗಳು. ಸಂಪೂರ್ಣ ಹವಾನಿಯಂತ್ರಿವಾಗಿರುವ ರೈಲಿನಲ್ಲಿ ರಾಮಾಯಣವನ್ನು ಪ್ರತಿಬಿಂಬಿಸುವ ಭಿತ್ತಿಚಿತ್ರಗಳು, ಶಿಲ್ಪಗಳು ರೈಲಿನ ವಿಶೇಷವಾಗಿದೆ. ರೈಲಿನ ಪ್ರಯಾಣ ಸಂಪೂರ್ಣ ಆಧ್ಯಾತ್ಮಿಕ ಹಾಗೂ ಭಕ್ತಿ ಪರವಶವಾಗಿರುವಂತೆ ರೈಲಿನ ಬೋಗಿಗಳನ್ನು ಸಿದ್ದಪಡಿಸಲಾಗಿದೆ. ರಾಮಾಯಣ ಎಕ್ಸ್ಪ್ರೆಸ್ನ ಸಂಪೂರ್ಣ ವರ್ಷದ ಕಾರ್ಯಾಚರಣೆಯ ದಿನಾಂಕಗಳು ಮತ್ತು ಪ್ರಾರಂಭದ ಸ್ಥಳಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಮಂಡಳಿ ಅಧ್ಯಕ್ಷ ಯಾದವ್ ಹೇಳಿದರು.ಈ ಬಾರಿ ದೇಶದ ವಿವಿಧ ಸ್ಥಳಗಳಿಂದ ಇದನ್ನು ಪ್ರಾರಂಭಿಸಲಾಗುವುದು ಇದರಿಂದ ಜನರಿಗೆ ಏಕ ಕಾಲದಲ್ಲಿ ಪ್ರಯಾಣಿಸಲು ಅವಕಾಶ ದೊರಕಲಿದೆ ಎಂದರು.ಭವಿಷ್ಯದಲ್ಲಿ ರಾಮಾಯಣ ಎಕ್ಸ್ಪ್ರೆಸ್ ಅನ್ನು ನೇಪಾಳದ ಜನಕ್ಪುರಕ್ಕೆ ಸಂಪರ್ಕಿಸುವ ಚಿಂತನೆ ಇದೆ ಎಂದು ಅವರು ಹೇಳಿದರು. ವಿಶೇಷವೆಂದರೆ ಭಾರತೀಯ ರೈಲ್ವೆ ನೇಪಾಳ ಸರ್ಕಾರದ ಸಹಯೋಗದೊಂದಿಗೆ ಜಯನಗರದಿಂದ ಜನಕ್ ಪುರಕ್ಕೆ ರೈಲ್ವೆ ಮಾರ್ಗವನ್ನು ನಿರ್ಮಿಸಿ ಕೊಟ್ಟಿದೆ. ಶೀಘ್ರವೇ ಇದರ ಉದ್ಘಾಟನೆ ನಡೆಯಲಿದೆ. ಈ ರೈಲು ರಾಮೇಶ್ವರಂ, ನಾಸಿಕ್, ಚಿತ್ರಕೂಟ ಮತ್ತು ಅಯೋಧ್ಯೆಯನ್ನು ಸಂಪರ್ಕಿಸುತ್ತದೆ ಎಂದು ಮಾಹಿತಿ ನೀಡಿದರು.