ಕಲಬುರಗಿ 04: ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ ಆಗಿದ್ದಾರೆ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು.
ಸಚಿನ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ ಎನ್ನುವ ಧಾಟಿಯಲ್ಲೇ ಡಿಸಿಎಂ ಶಿವಕುಮಾರ ಹೇಳಿದ್ದಾರೆ. ಅದಲ್ಲದೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಇದೇ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಅವರಿಗೆ ನೊಟೀಸ್ ಬರಲಿದೆ. ಒಟ್ಟಾರೆ ಸಣ್ಣ ಸಾಸಿವೆ ಕಾಳು ಕದ್ದರೂ ಬಿಜೆಪಿ ಬಿಡುವುದಿಲ್ಲ ಎಂದು ಗುಡುಗಿದರು.
ರಾಜ್ಯ ಸರ್ಕಾರ ದಿವಾಳಿಯಾಗಿದೆ. ಇದೇ ಕಾರಣಕ್ಕೆ ಹಾಲು, ಆಲ್ಕೋಹಾಲ್, ಸ್ಯ್ಟಾಂಪ್ ಡ್ಯೂಟಿ, ತೈಲ ಸೆಸ್ ಹೆಚ್ಚಳ, ಸಾರಿಗೆ ಸೇರಿ ಒಟ್ಟಾರೆ ಎಲ್ಲವುಗಳ ಬೆಲೆ ಏರಿಕೆ ಮಾಡಲಾಗಿದೆ. ಒಟ್ಟಾರೆ ಕರ್ನಾಟಕ ಈ ಹಿಂದಿನ ಬಿಹಾರಕ್ಕಿಂತ ಅಧೋಗತಿಗೆ ಹೋಗುತ್ತಿದೆ ಎಂದು ಆರ್.ಅಶೋಕ ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲುವಾದಿ ನಾರಾಯಣ ಸ್ವಾಮಿ ಮಾತನಾಡಿ, ಸಂವಿಧಾನದ ಮೇಲೆ ಅವರಿಗೆ ನಂಬಿಕೆ ಇದ್ದರೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ. ಬಿಜೆಪಿ ನಾಯಕರ ಹತ್ಯೆಗೆ ಮಹಾರಾಷ್ಟ್ರ ಮೂಲದವರಿಗೆ ಸುಪಾರಿ ಕೊಡಲಾಗಿದೆ. ಹೀಗಾಗಿ ಪ್ರಕರಣ ಸಿಬಿಐಗೆ ಕೊಡಬೇಕೆಂದರು. ಪ್ರತಿಭಟನೆಗೆ ಬಿಜೆಪಿಗರಿಗೆ ಪ್ರಿಯಾಂಕ್ ಖರ್ಗೆ ಅಭಿಮಾನಿಗಳು ತಂಪು ಪಾನೀಯ ವ್ಯವಸ್ಥೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ನಾವೇನು ಸಚಿವ ಪ್ರಿಯಾಂಕ್ ಖರ್ಗೆ ಮನೆಗೆ ಹೆಣ್ಣು ಕೇಳಿ ಸಂಬಂಧ ಬೆಳೆಸಲು ಹೋಗುತ್ತಿಲ್ಲ. ಓರ್ವ ಬಡ ಗುತ್ತಿಗೆದಾರನ ಸಾವಿಗೆ ನ್ಯಾಯ ಕೇಳಲು ಹೋಗುತ್ತಿದ್ದೇವೆ ಎಂದು ತಿರುಗೇಟು ನೀಡಿದರು.
ವಿಧಾನ ಪರಿಷತ್ ಸದಸ್ಯ ಸಿ. ಟಿ ರವಿ ಸೇರಿದಂತೆ ಮುಂತಾದವರಿದ್ದರು.
ನಗರದ ಐವಾನ್ ಇ ಶಾಹಿ ಅತಿಥಿ ಗೃಹ ಸಮೀಪದ ಪ್ರಿಯಾಂಕ್ ಅವರ ಮನೆಯ ಮುಂದೆ ನೀರಿನ ಬಾಟಲ್, ಎಳನೀರು, ಮಜ್ಜಿಗೆ, ಟೀ ಇರಿಸಿಕೊಂಡು ನೂರಾರು ಕಾರ್ಯಕರ್ತರು ಜಮಾಯಿಸಿದ್ದಾರೆ.