ಅಧ್ಯಾತ್ಮಿಕ ಚಿಂತನೆಗಳಿಂದ ಮಾನಸಿಕ ನೆಮ್ಮದಿ ಪ್ರಾಪ್ತಿ: ಶಿಂಧೆ
ವಿಜಯಪುರ: ಇಡೀ ಜಗತ್ತಿನಲ್ಲಿಯೇ ಧಾರ್ಮಿಕ ಪರಂಪರೆ-ಆಚರಣೆ, ಸಂಪ್ರದಾಯ ಮತ್ತು ಸಂಸ್ಕೃತಿ-ಸಂಸ್ಕಾರಕ್ಕೆ ಹೆಸರುವಾಸಿಯಾದ ರಾಷ್ಟ್ರ ನಮ್ಮದು. ಸಾಂಸ್ಕೃತಿಕ ನೆಲೆವೀಡು ನಮ್ಮ ರಾಷ್ಟ್ರ. ಹಲವು ಧರ್ಮ, ಸಂಪ್ರದಾಯ, ಆಚರಣೆ, ಭಾಷೆ, ಸಂಸ್ಕೃತಿ ಬೇರೆ ಬೇರೆಯಾದರೂ ಅಖಂಡತೆ ಮತ್ತು ವಿವಿಧತೆಯಲ್ಲಿ ಏಕತೆ ಎಂಬುದನ್ನು ತೋರಿಸಿಕೊಟ್ಟ ದೇಶ ನಮ್ಮದು. ನಾವೆಲ್ಲರೂ ಇಲ್ಲಿ ನಾವೆಲ್ಲರೂ ಒಂದು ಎಂಬ ಸದ್ಭಾವದಿಂದ ಬದುಕುತ್ತಿದ್ದೇವೆ. ಪರಸ್ಪರ ಸಹೋದರತೆ-ಭ್ರಾತೃತ್ವದೊಂದಿಗೆ ಒಂದೆಡೆ ಎಲ್ಲ ಧರ್ಮಿಯರು ಶಾಂತಿಯುತ ಜೀವನ ನಡೆಸಲು ಆಶ್ರಯ ನೀಡಿದ ಪವಿತ್ರ ದೇಶ ನಮ್ಮದಾಗಿದೆ. “ಯತ್ರ ನಾರೇಶು ಪೂಜ್ಯಂತೇ ತತ್ರ ರಮಂತೇ ದೇವತಾ:” ಎಂಬ ಸಂಸ್ಕೃತ ಶ್ಲೋಕದಂತೆ ಎಲ್ಲಿ ಸ್ತ್ರೀಯನ್ನು ಪೂಜ್ಯನೀಯ ಮತ್ತು ಗೌರವಯುತ ಭಾವನೆಯಿಂದ ಕಾಣುತ್ತಾರೋ ಅಲ್ಲಿ ಸ್ವತ: ದೇವತೆಗಳೇ ಬಂದು ನೆಲೆಸುತ್ತಾರೆ ಎಂಬ ಪ್ರತೀತಿಯಿದೆ. ಅದಕ್ಕಾಗಿ ನಮ್ಮ ತಾಯಂದಿರು ಮಕ್ಕಳಲ್ಲಿ ಧಾರ್ಮಿಕ-ಸಾಮಾಜಿಕ, ನಮ್ಮ ಪರಂಪರೆ-ಸಂಪ್ರದಾಯ, ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರಗಳನ್ನು ಒಡಮೂಡಿಸುವ ಕಾರ್ಯ ಮಾಡಬೇಕು. ಅಂದಾಗ ಮಾತ್ರ ಮುಂದಿನ ಜನಾಂಗವು ನಮ್ಮ ಧಾರ್ಮಿಕ ಸಂಪ್ರದಾಯ-ವಿಧಿವಿಧಾನಗಳನ್ನು ಉಳಿಸಿ-ಬೆಳೆಸಲು ಸಾಧ್ಯ ಎಂದು ಲಕ್ಷ್ಮಣ ಶಿಂಧೆ ಅವರು ಅಭಿಪ್ರಾಯಪಟ್ಟರು.
ನಗರದ ಎನ್.ಜಿ.ಓ ಕಾಲನಿಯ ಆಂಜನೇಯ ದೇವಸ್ಥಾನದಲ್ಲಿ ದಿ. 4ರಂದು ಜರುಗಿದ ದೇವಸ್ಥಾನದ ಪದಾಧಿಕಾರಿಗಳು ಹಾಗೂ ಸದಸ್ಯರ ಸೇರೆ್ಡ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಕೇವಲ ಕಂಪ್ಯೂಟರ್, ಮೋಬೈಲ್, ವ್ಯಾಟ್ಸಾಪ್, ಫೇಸಬುಕ್‌ನಂತಹ ಸಾಮಾಜಿಕ ಜಲತಾಣ ಹಾಗೂ ಸಮೂಹ ಮಾಧ್ಯಮಗಳ ಪ್ರಬಾವಕ್ಕೆ ಒಳಗಾಗಿ ತಮ್ಮ ಜೀವನವನ್ನೇ ವೃಥಾ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಮೌಲ್ವಿಕ, ನೈತಿಕ ಹಾಗೈ ಸೈದ್ಧಾಂತಿಕ ವೈಚಾರಿಕ ಮನೋಭಾವನೆ ಕಡಿಮೆಯಾಗುತ್ತಿರುವ ಇಂದಿನ ಕಾಲದಲ್ಲಿ ಯುವಕರಲ್ಲಿ ಒಳ್ಳೆಯ ಆಚಾರ-ವಿಚಾರ, ಸನ್ನಡತೆ, ಸಚ್ಚಾರಿತ್ರ್ಯ, ಸದ್ಭಾವನೆಯಂತಹ ಗುಣಗಳನ್ನು ಒಡಮೂಡಿಸಿ ಅವರು ಭಾವೀ ಭವ್ಯ ಭಾರತದ ಸತ್ಪ್ರಜೆಗಳಾಗುವಂತೆ ರೂಪಿಸುವುದು ಇಂದಿನ ಅಗತ್ಯತೆಯಾಗಿದೆ. ನಾವೆಲ್ಲರೂ ಮನಸ್ಸಿಗೆ ಶಾಂತಿ-ನೆಮ್ಮದಿಯನ್ನು ನೀಡುವ ಪವಿತ್ರ ತಾಣಗಳಾದ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯ, ಧಾರ್ಮಿಕ ಸಂಪ್ರದಾಯ-ಪದ್ಧತಿಗಳನ್ನು ಆಚರಿಸಬೇಕು. ಈ ದೇವಸ್ಥಾನದಲ್ಲಿ ವಾರಕೊಮ್ಮೆ ಭಜನೆ-ಗಾಯನ, ಕೀರ್ತನೆ ಮತ್ತು ಸತ್ಸಂಗದಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಿಂತನಾಗೋಷ್ಠಿಗಳು ನಡೆಯಬೇಕು. ನೇಮಕಗೊಂಡ ಪ್ರತಿಯೊಬ್ಬ ಸದಸ್ಯರು ದೇವಸ್ಥಾನದ ಅಭಿವೃದ್ಧಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು ತನು-ಮನ-ಧನದ ಮೂಲಕ ಸಹಕರಿಸಬೇಕೆಂದು ಸಲಹೆ ನೀಡಿದರು.
ವೇದಿಕೆಯ ಮೇಲೆ ಎಸ್.ಆರ್. ನಿಂಗನಗೌಡ್ರ, ಸರೋಜನಿ ಬಿರಾದಾರ ಮತ್ತು ಮಹಾದೇವಿ ಪಾಟೀಲ ಉಪಸ್ಥಿತರಿದ್ದರು. ನೂತನವಾಗಿ ದೇವಸ್ಥಾನದ ಸಮೀತಿಗೆ ನೇಮಕಗೊಂಡ ನಿರ್ದೇಶಕರು ಹಾಗೂ ಸದಸ್ಯರನ್ನು ಸನ್ಮಾನಿಸಲಾಯಿತು.
ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಲವಂತ ಬಳೂಲಗಿಡದ, ಎಸ್.ಎಸ್.ತೆನಹಳ್ಳಿ, ಮಲ್ಲನಗೌಡ ಪಾಟೀಲ, ಶಿವಪ್ಪ ಸಾವಳಗಿ, ಬಾಬು ಕೋಲಕಾರ, ನಾನಾಸಾಬ ಕೂಟನೂರ, ಆರ್.ಬಿ.ಕುಮಟಗಿ, ಶಶಿ ಉತ್ನಾಳ, ಆಚಾರ್ಯ ಆರ್.ಎಸ್.ಹಿರೇಮಠ, ರಮೇಶ ಕೋಷ್ಠಿ, ಗಂಗಾಧರ ಚಾಬುಕಸವಾರ, ವೆಂಕಟೇಶ ಹೊಸಮನಿ, ಪ್ರೊ. ಎಂ.ಆರ್.ಜೋಶಿ, ಎಸ್.ಆರ್. ಪತ್ತಾರ ಇನ್ನಿತರರು ಹಾಗೂ ಅಕ್ಕನ ಬಳಗ ಮಹಿಳಾ ಸದಸ್ಯರು ಭಾಗವಹಿಸಿದ್ದರು. ಪ್ರೊ. ಎಂ.ಎಸ್.ಖೊದ್ನಾಪುರ ನಿರೂಪಿಸಿದರು.