ಅಗರ್ತಲಾ, ನವೆಂಬರ್ 11 : ತ್ರಿಪುರಾ ಹೈಕೋರ್ಟ್ಗೆ ನೂತನವಾಗಿ ನೇಮಕಗೊಂಡ ಮುಖ್ಯ ನ್ಯಾಯಮೂರ್ತಿ ಆಕಿಲ್ ಅಬ್ದುಲ್ ಹಮೀದ್ ಖುರೇಶಿ ಅವರು ನವೆಂಬರ್ 16 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ರಾಜ್ಯಪಾಲ ರಮೇಶ್ ಬೈಸ್ ಅವರು ಖುರೇಶಿ ಅವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ರಾಷ್ಟ್ರಪತಿಗಳ ಶಾಸನಬದ್ಧ ಅನುಮೋದನೆಯ ನಂತರ ಬಾಂಬೆ ಹೈಕೋರ್ಟ್ನ್ ನ್ಯಾಯಾಧೀಶರಾಗಿದ್ದ ನ್ಯಾಯಮೂರ್ತಿ ಕುರೇಶಿಯವರನ್ನು ತ್ರಿಪುರದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಕಳೆದ ನವೆಂಬರ್ 8 ರಂದು ಔಪಚಾರಿಕ ಅಧಿಸೂಚನೆ ಹೊರಡಿಸಿತ್ತು. ಸಂವಿಧಾನದ 217 ನೇ ವಿಧಿ (1) ರ ನಿಯಮ (1) ರ ಪ್ರಕಾರ ರಾಷ್ಟ್ರಪತಿಗಳು ಅಧಿಕಾರವನ್ನು ಚಲಾಯಿಸಿ, ನ್ಯಾಯಮೂರ್ತಿ ಕುರೇಶಿ ಅವರನ್ನು ತ್ರಿಪುರಾ ಹೈಕೋರ್ಟ್ನ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿದ್ದಾರೆ. ಅವರು ಅಧಿಕಾರ ವಹಿಸಿಕೊಂಡಂದಿನಿಂದ ಇದು ಜಾರಿಗೆ ಬರುತ್ತದೆ ಎಂದು ಅಧಿಸೂಚನೆಯಲ್ಲಿ ಕೇಂದ್ರ ಸರ್ಕಾರ ತಿಳಿಸಿತ್ತು. 59 ವರ್ಷದ ಆಕಿಲ್ ಕುರೇಶಿ 2004 ರಲ್ಲಿ ಗುಜರಾತ್ ಹೈಕೋರ್ಟ್ಗೆ ನ್ಯಾಯಮೂರ್ತಿಯಾಗಿ ಸೇರ್ಪಡೆಗೊಂಡು, ಕಳೆದ ವರ್ಷ ನವೆಂಬರ್ 2 ರವರೆಗೆ ಅಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಅವರನ್ನು ಬಾಂಬೆ ಹೈಕೋರ್ಟ್ನ್ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು. ಅಲ್ಲಿಂದ ಅವರನ್ನು ತ್ರಿಪುರದ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ. ಈ ವರ್ಷದ ಮೇ ತಿಂಗಳಲ್ಲಿ, ಸುಪ್ರೀಂ ಕೋರ್ಟ್ನ್ ಕೊಲ್ಜಿಯಂ ಅವರನ್ನು ಮಧ್ಯಪ್ರದೇಶದ ಹೈಕೋರ್ಟ್ನ್ ಮುಖ್ಯ ನ್ಯಾಯಮೂರ್ತಿಯಾಗಿ ಶಿಫಾರಸು ಮಾಡಿದ್ದರೂ ಅದನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಈ ವರ್ಷದ ಜುಲೈನಲ್ಲಿ ಗುಜರಾತ್ ಹೈಕೋರ್ಟ್ ವಕೀಲರ ಸಂಘ, ನ್ಯಾಯಮೂರ್ತಿ ಖುರೇಶಿ ನೇಮಕಾತಿ ವಿಳಂಬವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ವಿಚಾರಣೆಯ ವೇಳೆ ಸರ್ಕಾರವು, ಅವರ ಹೆಸರು ಮಧ್ಯಪ್ರದೇಶ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಸೂಕ್ತವಲ್ಲ ಎಂದು ಹೇಳಿತ್ತು. ಆಗಸ್ಟ್ 23 ಮತ್ತು 27 ರಂದು ಸರ್ಕಾರವು ಕೊಲಿಜಿಯಂಗೆ ಎರಡು ಪತ್ರ ಬರೆದು ಕುರೇಶಿ ಹೆಸರನ್ನು ಮರು ಪರಿಶೀಲಿಸುವಂತೆ ಕೇಳಿತ್ತು. ಕೊನೆಯ ಸೆಪ್ಟೆಂಬರ್ 5 ರಂದು ಕೊಲಿಜಿಯಂ ಅವರ ಹೆಸರನ್ನು ತ್ರಿಪುರಾ ಹೈಕೋರ್ಟ್ನ್ ಮುಖ್ಯ ನ್ಯಾಯಮೂರ್ತಿಯಾಗಿ ಶಿಫಾರಸು ಮಾಡಿತು.