ಜಿಲ್ಲೆಗೆ ಹೊರ ದೇಶ, ಹೊರ ರಾಜ್ಯಗಳಿಂದ ಬರುವವರಿಗೆ ಕ್ವಾರಂಟೈನ್: ಚಿಕ್ಕಮಗಳೂರು ಡಿಸಿ

ಚಿಕ್ಕಮಗಳೂರು,  ಮೇ 12, ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಿ ಜಿಲ್ಲೆಗೆ ಹೊರದೇಶ  ಹಾಗೂ ಹೊರ ರಾಜ್ಯಗಳಿಂದ ವ್ಯಕ್ತಿಗಳು ಬಂದಾಗ ಅವರನ್ನು ತಪಾಸಣೆ ನಡೆಸಿ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದ್ದಾರೆ.ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ  ಕೋವಿಡ್-19ಗೆ ಸಂಬಂಧಿಸಿದಂತೆ ಹೊರದೇಶ ಹಾಗೂ ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ  ಬಂದವರನ್ನು ನಿಗಾವಹಿಸುವ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ  ವಹಿಸಿ ಮಾತನಾಡಿದರು.
ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಿ  ಜಿಲ್ಲೆಯೊಳಗೆ ಹೊರ ದೇಶ ಹಾಗೂ ಹೊರ ರಾಜ್ಯಗಳಿಂದ ಬರುವ ವ್ಯಕ್ತಿಗಳ ಆರೋಗ್ಯ ತಪಾಸಣೆ  ನಡೆಸಿ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿರಿಸಲಾಗುವುದು ಅದಕ್ಕಾಗಿ  ಜಿಲ್ಲೆಯ ತೇಗೂರಿನ  ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಬೇಲೂರು ರಸ್ತೆಯಲ್ಲಿನ 2 ಹೋಟೆಲ್‌ಗಳನ್ನು  ನಿಗದಿಪಡಿಸಲಾಗಿದೆ ಎಂದರು.
ತಮಿಳುನಾಡು, ರಾಜಸ್ಥಾನ,  ಮಹಾರಾಷ್ಟ್ರದಂತಹ ಹೆಚ್ಚು ಸೋಂಕಿನ ಪ್ರದೇಶಗಳಿಂದ ಬಂದವರನ್ನು ತಪಾಸಣೆ ನಡೆಸಿ ಸೋಂಕಿನ  ಲಕ್ಷಣಗಳಿದ್ದಲ್ಲಿ ಕೋವಿಡ್ ಸೆಂಟರ್‌ನಲ್ಲಿರಿಸಲಾಗುವುದು. ಜಿಲ್ಲೆಯ ಎಲ್ಲಾ ಗಡಿ  ಭಾಗಗಳಲ್ಲಿ ಸೂಕ್ತ ಭದ್ರತೆ ಇದ್ದು ಹೊರಭಾಗಗಳಿಂದ ಬಂದ ವ್ಯಕ್ತಿಗಳನ್ನು ತಪಾಸಣೆ ಮಾಡಿ  14 ದಿನಗಳ ಕಾಲ ಹಾಸ್ಟೆಲ್ ಕ್ವಾರಂಟೈನ್‌ನಲ್ಲಿಡಬೇಕು ಎಂದು ತಿಳಿಸಿದರು.
ಕೋರೋನಾ  ಸೋಂಕು ನಿಯಂತ್ರಿಸಲು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಬಳಕೆ ಮಾಡುವಂತೆ  ತಿಳಿಸಲಾಗಿದೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದವರ ವಿರುದ್ಧ 100 ರೂ.ಗಳ ದಂಡ ವಿಧಿಸುವಂತೆ  ಗ್ರಾಮಪಂಚಾಯಿತಿಗಳು ಹಾಗೂ ಸ್ಥಳೀಯ ಸಂಸ್ಥೆಗಳು ಕ್ರಮವಹಿಸಬೇಕು ಎಂದ ಅವರು, ಹಾಸ್ಟೆಲ್  ಕ್ವಾರಂಟೈನ್‌ನಲ್ಲಿರುವವರು ತಪ್ಪಿಸಿಕೊಳ್ಳದಂತೆ ನಿಗಾವಹಿಸಬೇಕು. ಅಂತಹ ವ್ಯಕ್ತಿಗಳು  ಕಂಡಲ್ಲಿ ಆಶಾ ಕಾರ್ಯಕರ್ತೆಯರು ಅಥವಾ ಸ್ಥಳೀಯ ಗ್ರಾಮಪಂಚಾಯಿತಿಗೆ ಮಾಹಿತಿ ನೀಡುವಂತೆ  ತಿಳಿಸಿದರು.
ಹೊರದೇಶಗಳಿಂದ ವಿದ್ಯಾರ್ಥಿಗಳು, ವೈದ್ಯರು  ಸೇರಿದಂತೆ ವಿವಿಧ ವರ್ಗಗಳ ಜನರು ಬರುವಾಗ ಅವರಿಗೆ ಹೋಟೆಲ್ ವ್ಯವಸ್ಥೆ  ಅಗತ್ಯವೆನಿಸಿದಲ್ಲಿ ಅದಕ್ಕೆ ಅವಕಾಶ ಕಲ್ಪಿಸಲಾಗುವುದು. ಆದರೆ ಅದರ ಸಂಪೂರ್ಣ ವೆಚ್ಚವನ್ನು  ಅವರೇ ಭರಿಸಬೇಕು. ಸಾಧ್ಯವಾದಷ್ಟು ಮಂದಿಗೆ ಹಾಸ್ಟೆಲ್ ಕ್ವಾರಂಟೈನ್‌ನಲ್ಲಿರಿಸಲು  ಕ್ರಮವಹಿಸಲಾಗುವುದು ಎಂದರು.
ಹಾಸ್ಟೆಲ್  ಕ್ವಾರಂಟೈನ್‌ನಲ್ಲಿದ್ದಾಗ ಅವರಿಗೆ ಸೂಕ್ತ ಆಹಾರ, ನೀರು, ವಿದ್ಯುತ್ ಇರುವಂತೆ  ನೋಡಿಕೊಳ್ಳಬೇಕು. ಇದಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಂಬಂಧಿಸಿದ  ಅಧಿಕಾರಿಗಳಿಗೆ ಸೂಚಿಸಿದ ಅವರು, ಕೆಲವೊಂದು ಕಡೆಗಳಲ್ಲಿ ಒತ್ತಾಯಪೂರ್ವಕವಾಗಿ ಸ್ಟಾಂಪಿಂಗ್  ಮಾಡಿ ಅವರಿಗೆ ಅಲರ್ಜಿಯಾಗಿರುವಂತಹ ದೂರುಗಳು ಕೇಳಿಬರುತ್ತಿವೆ. ಈ ಬಗ್ಗೆ ಎಚ್ಚರಿಕೆ  ವಹಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ  ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಪೂವಿತಾ, ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ಹರೀಶ್ ಪಾಂಡೆ, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಉಪವಿಭಾಗಾಧಿಕಾರಿ  ಡಾ.ಹೆಚ್.ಎಲ್. ನಾಗರಾಜ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಮತ್ತಿತರರು  ಉಪಸ್ಥಿತರಿದ್ದರು.