ಲೋಕದರ್ಶನ ವರದಿ
ಕೊಪ್ಪಳ 28: ಇಂದಿನ ಮಕ್ಕಳೇ ನಾಡಿನ ಭಾವಿ ಪ್ರಜೆಗಳಾಗಿದ್ದು, ಅವರ ಭವಿಷ್ಯ ಉಜ್ವಲಗೊಳ್ಳಲು ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ಅಗತ್ಯವಾಗಿದೆ. ಈ ದಿಸೆಯಲ್ಲಿ ಪಿ.ಲಿಂಗಯ್ಯ ಶಿಕ್ಷಣ ಸಂಸ್ಥೆಯ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಕಾಡಾ ಕಛೇರಿಯ ಆಡಳಿತಾಧಿಕಾರಿ ಸಯ್ಯದ್ ಇಸ್ಹಾಕ್ ಅಫ್ಸ್ರ್ ಹೇಳಿದರು.
ಅವರು ಗುರುವಾರ ರಾತ್ರಿ ತಾಲೂಕಿನ ತುಂಗಭದ್ರಾ ಯೋಜನಾ ಪ್ರದೇಶವಾದ ಮುನಿರಾಬಾದ್ ಡ್ಯಾಂನ ಪಿ.ಲಿಂಗಯ್ಯ ಆಂಗ್ಲ ಮಾದ್ಯಮ ಶಾಲೆಯ 15ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಪಾಠದೊಂದಿಗೆ ಒಳ್ಳೆಯೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸುವ ಮೂಲಕ ಅವರನ್ನು ದೇಶದ ಒಳ್ಳೆಯ ಪ್ರಜೆ ಮಾಡಬೇಕೆಂದು ಶಿಕ್ಷಕರಿಗೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಕಾಡಾ ಕಛೇರಿಯ ಆಡಳಿತಾಧಿಕಾರಿ ಸಯ್ಯದ್ ಇಸಾಕ್ ಅಪ್ಸರ್ ಸಲಹೆ ನೀಡಿದರು.
ನಂತರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಗದುಗಿನ ಹೊಸಳ್ಳಿ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಬೂದೇಶ್ವರ ಮಹಾಸ್ವಾಮಿಗಳು ಮಾತನಾಡಿ, ಯಾರು ಪುಸ್ತಕವನ್ನು ತಲೆ ಬಗ್ಗಿಸಿ ಓದುತ್ತಾರೋ ಪುಸ್ತಕವು ಅವರನ್ನು ಪ್ರಪಂಚದಲ್ಲಿ ತಲೆ ಎತ್ತುವಂತೆ ಮಾಡುತ್ತದೆ. ಪ್ರಪಂಚದಲ್ಲಿ ಜನರು ಶಕ್ತಿವಂತರನ್ನು ಗೌರವಿಸುತ್ತಾರೆ. ಆಸಕ್ತರನ್ನು ಗೌರವಿಸುವುದಿಲ್ಲ ಎಂದರು. ಸ್ವಾತಂತ್ರ್ಯಯೋದ ಪಿ.ಲಿಂಗಯ್ಯ ಇವರ ಮಕ್ಕಳು ಗ್ರಾಮದಲ್ಲಿ ತಮ್ಮ ತಂದೆಯ ಹೆಸರಿನಲ್ಲಿ ಶಾಲೆಯನ್ನು ತೆರೆಯುವ ಮೂಲಕ ಜನರ ಮನಸ್ಸಿನಲ್ಲಿ ತಮ್ಮ ತಂದೆಯವರ ಹೆಸರನ್ನು ಶಾಶ್ಚತವಾಗಿ ಉಳಿಯುವಂತೆ ಮಾಡಿದ್ದಾರೆ ಎಂದು ಅವರ ಕಾರ್ಯ ವೈಖರಿ ಬಣ್ಣಿಸಿ ಆಶೀರ್ವಚನ ನೀಡಿದರು.
ಅನುದಾನ ರಹಿತ ಶಾಲೆಗಳ ಅಧ್ಯಕ್ಷರಾದ ರಾಘವೇಂದ್ರ ಗಾನಘಂಟಿ ವಕೀಲರು ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಪ್ರಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಪಿ.ಲಿಂಗಯ್ಯ ಮೆಮೋರಿಯಲ್ ಶಾಲೆ ಹಾಗೂ ಸಂಸ್ಥೆಯ ಅಧ್ಯಕ್ಷ ಸಾಂಬಶಿವ ರಾವ್ ವಹಿಸಿದ್ದರು. ಅಧೀಕ್ಷಕ ಅಭಿಯಂತ ಪಿ.ಲಕ್ಷ್ಮಪ್ಪ, ಕಾರ್ಯನಿರ್ವಾಹಕ ಅಭಿಯಂತ ಎಸ್.ವಲಿಶಾ, ಲೆಕ್ಕ ಪರಿಶೋಧಕ ಸಂಜಯ್ಯ ಕೊತ್ತಬಾಳ, ಬಳ್ಳಾರಿ ಸಂಜಯ್ ಗಾಂಧಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಗೌರಿಶಂಕರ, ಶಾಲೆಯ ಆಡಳಿತಾಧಿಕಾರಿ ಶ್ರೀನಿವಾಸ ಮುಖ್ಯ ಶಿಕ್ಷಕ ಸೆಲ್ವಿ ಜಾರ್ಜ, ಪಿ.ವರಪ್ರಸಾದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಂಸ್ಥೆಯ ಪರವಾಗಿ ಗಣ್ಯರಿಗೆ ಸನ್ಮಾನಿಸಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿ ಜನಮನ ಸೇಳೆಯಿತು.