ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ವಿಲೀನ: ಸೇವೆಗೆ ಹೆಚ್ಚುವರಿ ಶುಲ್ಕ ಇಲ್ಲ

ಬೆಂಗಳೂರು, ಏ.2, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಾದ ಕಾರ್ಪೋರೇಷನ್ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್ ಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜೊತೆಗೆ ವಿಲೀನಗೊಂಡಿದೆ. ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಗ್ರಾಹಕರು ಈ ಮೂರು ಬ್ಯಾಂಕಿನ ಎಟಿಎಂ ಬಳಸಿ ಹಣ ವಿಥ್ ಡ್ರಾ ಮಾಡಿಕೊಳ್ಳಬಹುದು. ಈ ಮೂರು ಬ್ಯಾಂಕ್ ಗಳ ಒಟ್ಟು 13,500 ಕ್ಕೂ ಹೆಚ್ಚು ಎಟಿಎಂಗಳಿವೆ ಹಾಗೂ 9500 ಕ್ಕೂ ಹೆಚ್ಚು ಬ್ಯಾಂಚ್ ಗಳನ್ನು ಹೊಂದಿವೆ. ಗ್ರಾಹಕರ ಆಯಾ ಬ್ಯಾಂಕಿನ (ಕಾರ್ಪೋರೇಷನ್ ಬ್ಯಾಂಕ್, ಆಂಧ್ರ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ)  ಅಕೌಂಟ್ ನಂಬರ್, ಐಎಫ್ಎಸ್ಸಿ ಕೋಡ್ ಗಳಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಗ್ರಾಹಕರು ತಮ್ಮ ಹಳೆಯ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಗಳನ್ನೇ ಬಳಸಿ ಹಣ ವಿಥ್ ಡ್ರಾ ಮಾಡಿಕೊಳ್ಳಬಹುದು. ಜತೆಗೆ ಇಂಟರ್‌ ನೆಟ್‌ ಅಥವಾ ಮೊಬೈಲ್  ಬ್ಯಾಂಕಿಂಗ್ ಪೋರ್ಟಲ್ ನಲ್ಲಿಯೂ ಯಾವುದೇ ಬದಲಾವಣೆ ಇರುವುದಿಲ್ಲ. ಈ ವಿಲೀನದಿಂದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು ದೇಶದ 5ನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲೊಂದಾಗಿದೆ. ಈ ವಿಲೀನದಿಂದ ದಕ್ಷಿಣ ರಾಜ್ಯಗಳಲ್ಲಿ ಬ್ಯಾಂಕ್ ಅನ್ನು ಮತ್ತಷ್ಟು ಸದೃಢವಾಗಿ ಮಾಡಲು ಸಹಕಾರಿಯಾಗಲಿದೆ.“ಕಳೆದ ಹಲವು ತಿಂಗಳಿಂದ ನನ್ನ ಸಂಪೂರ್ಣ ಬ್ಯಾಂಕಿನ ಕುಟುಂಬದ ಸದಸ್ಯರು ಮಾಡಿದ ಪ್ರಯತ್ನಗಳ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನಮ್ಮ ಗ್ರಾಹಕರಿಗೆ ವರ್ಧಿತ ಸೇವೆಗಳನ್ನು ಒದಗಿಸಲು ಒಂದು ಅಡಿಪಾಯವನ್ನು ಹಾಕಿದೆ. ನಾವು ಈಗ ನಮ್ಮ ಗ್ರಾಹಕರಿಗೆ ಎಟಿಎಂ, ಡಿಜಿಟಲ್ ಸೇವೆಗಳು ಮತ್ತು ಸಾಲ ಸೌಲಭ್ಯಗಳಿಗೆ ಹೆಚ್ಚು ಒತ್ತು ನೀಡುತ್ತೇವೆ” ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂಡಿ ಮತ್ತು ಸಿಇಒ ರಾಜ್‌ ಕಿರಣ್ ರೈ ಜಿ ತಿಳಿಸಿದ್ದಾರೆ.