ತಿರುವಿನಲ್ಲಿ ಸವಾರರಿಗೆ ಕಂಟಕವಾದ ಕಿಲ್ಲರ್ ಗುಂಡಿ ಸಾರ್ವಜನಿಕರ ಆಕ್ರೋಶ

ತಿರುವಿನಲ್ಲಿ ಸವಾರರಿಗೆ ಕಂಟಕವಾದ ಕಿಲ್ಲರ್ ಗುಂಡಿ ಸಾರ್ವಜನಿಕರ ಆಕ್ರೋಶ Public outrage over killer pothole that poses a thorn in the side of the road for cyclists

ಸವದತ್ತಿ 16: ನಗರದ ಕೆಂಚಲಾರಕೊಪ್ಪ ಹನುಮಾನ್ ದೇವಸ್ಥಾನದ ಹತ್ತಿರವಿರುವ ಪ್ರಮುಖ ತಿರುವಿನಲ್ಲಿ ದೊಡ್ಡದೊಂದು ಕಿಲ್ಲರ್ ಗುಂಡಿ (ತೆಗ್ಗು) ಬಿದ್ದಿದ್ದು, ಇಡೀ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಪ್ರತಿದಿನ ಪ್ರಾಣ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.ಈ ರಸ್ತೆಯ ಮೂಲಕವೇ ದಿನನಿತ್ಯ ತಾಲೂಕು ಆಡಳಿತದ ವಾಹನಗಳು, ನಗರಸಭೆಯ ಅಧಿಕಾರಿಗಳ ಗಾಡಿಗಳು, ಸಾರಿಗೆ ಬಸ್‌ಗಳು ಹಾಗೂ ಸಾವಿರಾರು ಸಾರ್ವಜನಿಕ ವಾಹನಗಳು ಸಂಚರಿಸುತ್ತವೆ.

ಅತ್ಯಂತ ಗಿಜಿಗುಡುವ ಈ ಪ್ರಮುಖ ತಿರುವಿನಲ್ಲಿ ಪ್ರತಿದಿನ ಸರ್ಕಾರಿ ಅಧಿಕಾರಿಗಳ ಗಾಡಿಗಳು ಓಡಾಡುತ್ತಿದ್ದರೂ ಯಾರಿಗೂ ಈ ಸಮಸ್ಯೆ ಕಾಣಿಸುತ್ತಿಲ್ಲವೇ ಯಾವುದಾದರೂ ದೊಡ್ಡ ದುರಂತ ಸಂಭವಿಸುವವರೆಗೆ ಅಧಿಕಾರಿಗಳು ಕಾಯುತ್ತಿದ್ದಾರೆಯೇ, ಎಂದು ಸ್ಥಳೀಯ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಾಮಾನ್ಯ ದಿನಗಳಲ್ಲೇ ಸಂಚರಿಸಲು ಕಷ್ಟಸಾಧ್ಯವಾಗಿರುವ ಈ ತಿರುವಿನಲ್ಲಿ, ಸ್ವಲ್ಪ ಮಳೆ ಬಂದರೆ ಸಾಕು ಇಡೀ ತೆಗ್ಗು ನೀರಿಂದ ತುಂಬಿಕೊಂಡು ಹೊಂಡದಂತಾಗುತ್ತದೆ.

ರಸ್ತೆಯಲ್ಲಿ ದೊಡ್ಡ ಗುಂಡಿ ಇರುವುದು ಕಾಣಿಸದೇ ದ್ವಿಚಕ್ರ ವಾಹನಗಳು ಹಾಗೂ ಇತರ ವಾಹನಗಳು ಅದರಲ್ಲಿ ಸಿಲುಕಿ ನಿಯಂತ್ರಣ ತಪ್ಪಿ ಬೀಳುತ್ತಿವೆ. ಈಗಾಗಲೇ ಹಲವು ವಾಹನ ಸವಾರರು ಇಲ್ಲಿ ಬಿದ್ದು ಸಣ್ಣಪುಟ್ಟ ಗಾಯ ಮಾಡಿಕೊಂಡಿದ್ದಾರೆ.ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪ್ರಾಣಾಪಾಯ ಅಥವಾ ಸರಣಿ ಅಪಘಾತ ಸಂಭವಿಸುವ ಮುನ್ನವೇ ಆಡಳಿತ ವರ್ಗ ಎಚ್ಚೆತ್ತುಕೊಳ್ಳಬೇಕಿದೆ. ಮಳೆಗಾಲ ಆರಂಭವಾಗುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ, ಈ ಅಪಾಯಕಾರಿ ತಿರುವಿಗೆ ತಕ್ಷಣವೇ ಡಾಂಬರು ಹಾಕಿ ರಸ್ತೆಯನ್ನು ಸುಸ್ಥಿತಿಗೆ ತರಬೇಕು.

ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ, ತುರ್ತಾಗಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು. ಸಾರ್ವಜನಿಕರು ಒತ್ತಾಯಿಸಿದರು.ರಸ್ತೆಯಲ್ಲಿನ ಗುಂಡಿಗಳಿಂದಾಗಿ ಪ್ರತಿದಿನ ಅಪಘಾತಗಳು ಸಂಭವಿಸುತ್ತಿವೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಈ ರಸ್ತೆಯನ್ನು ಸರಿಪಡಿಸುವ ಮೂಲಕ ಸಾರ್ವಜನಿಕರ ರಕ್ಷಣೆಯ ಜವಾಬ್ದಾರಿ ವಹಿಸಬೇಕು.