14 ವಲಯಗಳಲ್ಲಿ ಸಾರ್ವಜನಿಕ -ಖಾಸಗಿ ಮಾದರಿಯಲ್ಲಿ ಮೂಲಸೌಲಭ್ಯ ಯೋಜನೆ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು,  ಮೇ 30,ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ  ಇಂದು  ಮೂಲಸೌಲಭ್ಯ  ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಬೆಂಗಳೂರು  ಸಬ್ ಅರ್ಬನ್ ರೈಲು ಯೋಜನೆಗೆ  ಕೇಂದ್ರ ಸರ್ಕಾರದ ಅಂತಿಮ ಮಂಜೂರಾತಿಯನ್ನು ಶೀಘ್ರವಾಗಿ  ಪಡೆದುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳು  ಅಧಿಕಾರಿಗಳಿಗೆ ಸೂಚಿಸಿದರು. ಹಾಸನ–ಮಂಗಳೂರು ರೈಲು ಅಭಿವೃದ್ಧಿ ಕಂಪನಿ. ಕುಡಚಿ  -ಬಾಗಲಕೋಟೆ ರೈಲ್ವೆ ಯೋಜನೆಯ ಅನುಷ್ಠಾನದಲ್ಲಿನ ಅಡಚಣೆಗಳನ್ನು  ಶೀಘ್ರವಾಗಿ ಬಗೆಹರಿಸಲು   ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಸೂಚಿಸಿದರು. 
ಕೋವಿಡ್-19  ಹಿನ್ನೆಲೆಯಲ್ಲಿ ಸಾರ್ವಜನಿಕ –ಖಾಸಗಿ ಸಹಭಾಗಿತ್ವದಲ್ಲಿ  ಕೃಷಿ, ಶಿಕ್ಷಣ, ಇಂಧನ,  ಆರೋಗ್ಯ, ನೀರಾವರಿ, ಪ್ರವಾಸೋದ್ಯಮ, ಕ್ರೀಡೆ ಮತ್ತು ಯುವಜನ, ಕೈಗಾರಿಕೆ, ಸಾರಿಗೆ ಮತ್ತು  ಸಾಗಣೆ,  ವಸತಿ, ಗ್ರಾಮೀಣಾಭಿವೃದ್ಧಿ, ದೂರ ಸಂಪರ್ಕ ಸೇರಿದಂತೆ 14 ವಲಯಗಳಲ್ಲಿ  ಪಿ.ಪಿ.ಪಿ ಮಾದರಿಯಲ್ಲಿ ಮೂಲಸೌಲಭ್ಯ ಯೋಜನೆಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಆದ್ಯತೆ  ನೀಡಿದೆ. ಆದ್ದರಿಂದ  ರಾಜ್ಯದಲ್ಲಿ ಈಗಾಗಲೇ  500 ಕೋಟಿ ರೂ.ಮೌಲ್ಯದ ಪಿ.ಪಿ.ಪಿ  ಯೋಜನೆಗಳನ್ನು  ಅನುಮೋದನೆ ನೀಡಲಾಗಿದೆ ಎಂದ ಮುಖ್ಯಮಂತ್ರಿಗಳು, 14 ವಲಯಗಳಲ್ಲಿ  ಸಾರ್ವಜನಿಕ -ಖಾಸಗಿ ಮಾದರಿಯಲ್ಲಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸೂಚನೆ ನೀಡಿದರು.
ವಿಮಾನ ನಿಲ್ದಾಣಗಳ ಅಭಿವೃದ್ಧಿ , ಬೆಂಗಳೂರು ಸಿಗ್ನೇಚರ್ ಬುಸಿನೆಸ್ ಪಾರ್ಕ್  ಯೋಜನೆಗಳಲ್ಲಿ ಪ್ರಗತಿ ಸಾಧಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.  ರಾಜ್ಯದಲ್ಲಿ  ಶಿವಮೊಗ್ಗ –ರಾಣೇಬೆನ್ನೂರು ಮಾರ್ಗದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ.  ಪ್ರಸ್ತುತ ಏಳು ನೂತನ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ  ನೀಡಿದರು. ಶಾಸಕ  ಎಸ್.ಆರ್.ವಿಶ್ವನಾಥ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್,  ಇಲಾಖೆಯ ಪ್ರಧಾನ  ಕಾರ್ಯದರ್ಶಿ  ಕಪಿಲ್ ಮೋಹನ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.