ಪಟ್ಟಣದಲ್ಲಿ ಪ್ರವಚನಕ್ಕೆ ಸಕಲ ಸಿದ್ಧತೆ| 10 ಸಾವಿರ ಜನ ಸೇರುವ ನೀರೀಕ್ಷೆ
ತಾಳಿಕೋಟಿ 20: ಪಟ್ಟಣದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆ ವತಿಯಿಂದ ಫೆ. 21ರಿಂದ 23ರ ವರೆಗೆ ನಡೆಯಲಿರುವ ಸಾರ್ವಜನಿಕ ಕುರ್ ಆನ್ ಪ್ರವಚನ ಕಾರ್ಯಕ್ರಮದ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಇದರ ಯಶಸ್ವಿಗೆ ಪಟ್ಟಣದ ಸರ್ವ ಸಮಾಜದ ಬಾಂಧವರು ಸಹಕರಿಸಬೇಕು ಎಂದು ಜಮಾತೆ ಇಸ್ಲಾಮಿ ಹಿಂದ್ ನಗರ ಅಧ್ಯಕ್ಷ ಮುಜಾಹೀದ ನಮಾಜಕಟ್ಟಿ ಮನವಿ ಮಾಡಿಕೊಂಡರು.
ಗುರುವಾರ ಪಟ್ಟಣದಲ್ಲಿರುವ ಕುರ್ ಆನ್ ಪ್ರವಚನ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪ್ರವಚನದ ವಿವರ ನೀಡಿದ ಅವರು ಮೂರು ದಿನಗಳವರೆಗೆ ಪ್ರತಿ ದಿನ ಸಂಜೆ 7ರಿಂದ 9 ರವರೆಗೆ ನಡೆಯಲಿರುವ ಈ ಪ್ರವಚನ ಕಾರ್ಯಕ್ರಮವನ್ನು ಖ್ಯಾತ ಪ್ರವಚನಕಾರ ಜನಾಬ.ಮಹಮ್ಮದ್ ಕುಂಞಿ ಅವರು ನಡೆಸಿಕೊಡಲಿದ್ದಾರೆ. ಪ್ರಥಮ ದಿನದ ಪ್ರವಚನವು ಅಮಲು ಮುಕ್ತ ಸಮಾಜ ಮತ್ತು ಯುವ ಜನತೆ ವಿಷಯದ ಮೇಲೆ ನಡೆಯಲಿದ್ದು ಕಾರ್ಯಕ್ರಮದ ಸಾನಿಧ್ಯವನ್ನು ಖಾಸ್ಗತೇಶ್ವರ ಮಠದ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಕೊಡೆಕಲ್ಲದ ಶ್ರೀ ಶಿವಕುಮಾರ ಮಹಾಸ್ವಾಮಿಗಳು,ಶ್ರೀ ಶರಣಪ್ಪ ಮುತ್ಯಾ ಶರಣರು, ಜನಾಬ ಸೈಯದ್ ಶಕೀಲ ಅಹ್ಮದ್ ಖಾಜಿ, ಫಾದರ್ ರಾಬರ್ಟ್ ಕ್ರಿಸ್ಟಾ ವಹಿಸುವರು. ಸಕ್ಕರೆ ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರು ಕಾರ್ಯಕ್ರಮ ಉದ್ಘಾಟಿಸುವರು, ಜಮಾಅತೆ ಇಸ್ಲಾಮಿ ಹಿಂದ್ ಬೆಳಗಾವಿ ವಲಯ ಸಂಚಾಲಕ ಎಂ.ಐ.ಬಡಗಣ ಅಧ್ಯಕ್ಷತೆ ವಹಿಸಲಿದ್ದಾರೆ. ತಹಶೀಲ್ದಾರ್ ಕೀರ್ತಿ ಚಾಲಕ್, ನೇತೃ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ, ಆರ್ ಎಸ್ ಪಾಟೀಲ ಕೂಚಬಾಳ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ,ಪತ್ರಕರ್ತ ಜಿ.ಟಿ. ಗೋರೆ್ಡ ಹಾಗೂ ಪಟ್ಟಣದ ಗಣ್ಯಮಾನ್ಯರು ಉಪಸ್ಥಿತರಿರುತ್ತಾರೆ. ಗ್ರಾಮೀಣ ಭಾಗದಿಂದಲೂ ಎಲ್ಲ ಸಮಾಜದ ಬಾಂಧವರು ಈ ಕಾರ್ಯಕ್ರಮಕ್ಕೆ ಸ್ವಯಂ ಪ್ರೇರಿತರಾಗಿ ಆಗಮಿಸುತ್ತಿದ್ದಾರೆ ಅವರಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಲಾಗುವುದು. ಪ್ರವಚನಕ್ಕೆ ಆಗಮಿಸುವ ಆಸಕ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಮಾಧ್ಯಮದ ಮಿತ್ರರು ಈ ಪ್ರವಚನ ಕಾರ್ಯಕ್ರಮದ ಸಂದೇಶವನ್ನು ಇಡೀ ನಾಡಿಗೆ ತಲುಪಿಸುವ ಕಾರ್ಯವನ್ನು ಮಾಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ವಲಯ ಸಂಚಾಲಕ ಎಂ.ಐ.ಬಡಗಣ, ಸೈಯದ್ ಶಕೀಲ್ ಅಹ್ಮದ್ ಖಾಜಿ,ಅಲ್ಲಾಭಕ್ಷ ನಮಾಜಕಟ್ಟಿ, ಪ್ರವಚನ ಸಂಚಾಲಕ ಸೈಯದ್ ಇರ್ಫಾನ್ ಖಾಜಿ,ಸಹ ಸಂಚಾಲಕ ಹುಸೇನ್ ಪಟೇಲ,ಖಜಾಂಚಿ ಎಂ.ಎ.ಮೇತ್ರಿ,ಕಾಸೀಮ ಅಲಿ ಮನ್ಸೂರ ಇದ್ದರು.