ಆರೋಗ್ಯ ಇಲಾಖೆಗೆ ಅಗತ್ಯವಾದ ವಾಹನ ನೀಡಿ ಸಹಕರಿಸಿ: ಡಿಸಿಎಂ ಸವದಿ

ಬೆಂಗಳೂರು, ಏ.3, ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಅಗತ್ಯವಾದ ವಾಹನ ಸೌಲಭ್ಯ ಒದಗಿಸಿಕೊಡಬೇಕು ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಎಲ್ಲಾ ಇಲಾಖೆಯ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.ಕೊರೋನಾ ಸೋಂಕು ಹಿನ್ನೆಲೆಯಲ್ಲಿ  ದೇಶದಾದ್ಯಂತ ಲಾಕ್ ಡೌನ್ ಆಗಿರುವುದರಿಂದ ಅನೇಕ ಇಲಾಖೆಗಳಲ್ಲಿ ಪೂರ್ಣಪ್ರಮಾಣದ ಕಚೇರಿ  ಕೆಲಸಗಳು ನಡೆಯುತ್ತಿಲ್ಲ.  ಹೀಗಾಗಿ ಆಯಾ ಇಲಾಖೆಗಳಲ್ಲಿರುವ ವಾಹನಗಳು ಖಾಲಿ ಇರುವುದು  ಸಹಜ. ಆದರೆ ಕರೋನಾವನ್ನು  ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ  ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ಈಗಲೂ ಸಹ ಸಮರೋಪಾದಿಯಲ್ಲಿ ಕೆಲಸ  ಕಾರ್ಯನಿರ್ವಹಿಸುತ್ತಿರುವುದರಿಂದ ಈ  ಇಲಾಖೆಗಳಿಗೆ ಹೆಚ್ಚಿನ ವಾಹನಗಳ ಅಗತ್ಯಗಳಿವೆ.  ಆದ್ದರಿಂದ  ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ವಾಹನಗಳನ್ನು ಕರೋನಾ ನಿಯಂತ್ರಣಕ್ಕೆ ಮುಂದಾಗಿರುವ  ಆರೋಗ್ಯ ಮತ್ತು ಪೊಲೀಸ್ ಇಲಾಖೆ ಗಳ ಸೇವೆಗೆ ತಾತ್ಕಾಲಿಕವಾಗಿ ನೀಡಿ ಸಹಕರಿಸಬೇಕೆಂದು  ನಾನು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಕೋರಿ ಕೊಳ್ಳುತ್ತಿದ್ದೇನೆ ಎಂದು ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಕೊರೋನಾ   ನಿಯಂತ್ರಣ ಸೇವೆಗೆ ಈ ರೀತಿ ವಾಹನಗಳನ್ನು ವಿವಿಧ ಇಲಾಖೆಗಳಿಂದ ಅಧಿಕೃತವಾಗಿ ಪಡೆದು  ಆರೋಗ್ಯ ಇಲಾಖೆಗೆ ಒದಗಿಸುವ ಪ್ರಕ್ರಿಯೆಯನ್ನು ನಮ್ಮ ಸಾರಿಗೆ ಇಲಾಖೆಯ ಆರ್. ಟಿ. ಒ.  ಅಧಿಕಾರಿಗಳು  ಕೈಗೊಳ್ಳುತ್ತಿದ್ದಾರೆ. ಆದರೆ ಕೆಲವು ವಾಹನ ಚಾಲಕರು ಕೊರೋನಾದ ಭಯದಿಂದ  ಆರೋಗ್ಯ ಇಲಾಖೆಗೆ ತಮ್ಮ ವಾಹನಗಳೊಂದಿಗೆ ತಾತ್ಕಾಲಿಕ ಸೇವೆ ನೀಡಲು  ತೆರಳಲು   ನಿರಾಕರಿಸುತ್ತಿರುವ  ಪ್ರಕರಣಗಳು ಕಂಡುಬಂದಿವೆ.  ಆದರೆ ಈ  ಬಗ್ಗೆ ಭಯಪಡುವ ಅಗತ್ಯವಿಲ್ಲ. ಏಕೆಂದರೆ ಆರೋಗ್ಯ ಸೇವೆಗೆ ವಾಹನಗಳೊಂದಿಗೆ ತೆರಳುವ  ಚಾಲಕರಿಗೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಲು ಮಾರ್ಗದರ್ಶನ ನೀಡಲಾಗುತ್ತಿದೆ ಮತ್ತು  ವೈದ್ಯಕೀಯ ಪರಿಕರಗಳನ್ನು, ಸೌಕರ್ಯಗಳನ್ನು ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಆದ್ದರಿಂದ  ನಮ್ಮ ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಸಹಕರಿಸಿ ಆರೋಗ್ಯ ಸೇವೆಗೆ ಅಗತ್ಯವಾದ  ವಾಹನಗಳ ಸೇವೆಯನ್ನು ಒದಗಿಸಲು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಚಾಲಕರು  ಸಹಕರಿಸಬೇಕು ಅವರು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.