ಆಶಾ ಕಾರ್ಯಕರ್ತೆಯರಿಗೆ ಅಗತ್ಯ ಮಾಹಿತಿ ನೀಡಿ: ಬಿ.ಸಿ.ಪಾಟೀಲ್

ಹಾವೇರಿ,  ಏ 17, ಮನೆಯ  ಬಾಗಿಲಿಗೆ ಬರುವ ಆಶಾ ಕಾರ್ಯಕರ್ತೆಯರಿಗೆ ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು ಇದು  ಜನರ ಕರ್ತವ್ಯ ವಾಗಿದೆ ಎಂದು  ಕೃಷಿ  ಸಚಿವ ಬಿ.ಸಿ.ಪಾಟೀಲ್  ಹೇಳಿದ್ದಾರೆ. ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡಾ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ  ಉಚಿತ ಮಾಸ್ಕ್ ಗಳನ್ನು ವಿತರಿಸಿ ಅವರು ಮಾತನಾಡಿದರು. ಆಶಾಕಾರ್ಯಕರ್ತೆಯರು ಕೊರೊನಾ ವಾರಿಯರ್ಸ್ನಂತೆ ದುಡಿಯುತ್ತಿದ್ದು, ಮನೆಮನೆಗೆ ಹೋಗಿ ಜನರ ಆರೋಗ್ಯದ ಮಾಹಿತಿ ಪಡೆಯುತ್ತಿದ್ದಾರೆ.ವಿವರ ಕೇಳಲು ಬರುವ ಆಶಾಕಾರ್ಯಕರ್ತೆಯರಿಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು .


ಗ್ರಾಮಪಂಚಾಯಿತಿ ಕಡೆಯಿಂದ ಆಶಾಕಾರ್ಯಕರ್ತೆಯರಿಗೆ ಥರ್ಮೋಮೀಟರ್ ಒದಗಿಸಿದಲ್ಲಿ ಜನರ ಆರೋಗ್ಯ ತಪಾಸಣೆಗೆ ಸಹಕಾರವಾಗಲಿದೆ ಎಂದರು.ಜನರು ಯಾವುದೇ ಕಾರಣಕ್ಕೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು.ಲಾಕ್ಡೌನ್ ಹಿನ್ನಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆರೋಗ್ಯ ಮಾರ್ಗ ಸೂಚಿ ನಿಯಮಗಳನ್ನು ಉಲ್ಲಂಘಿಸಬಾರದು.ಯಾರಿಗಾದರೂ ಅನಾರೋಗ್ಯದ ಲಕ್ಷಣ ಕಂಡುಬಂದಲ್ಲಿ ಅದನ್ನು ತಕ್ಷಣವೇ ತಾಲೂಕು ವೈದ್ಯಾಧಿಕಾರಿ ಹಾಗೂ ತಾಲೂಕು ಆಡಳಿತದ ಗಮನಕ್ಕೆ ತರಬೇಕು ಎಂದೂ  ಸಚಿವರು ಸಲಹೆ ನೀಡಿದರು. ಬಳಿಕ ಹಿರೇಕೆರೂರಿನ ವ್ಯವಸಾಯೋತ್ಪನ್ನ ಸಹಕಾರಿ ಮಾರಾಟ ಸಂಘಕ್ಕೂ  ಭೇಟಿ ನೀಡಿದ ಸಚಿವರು, ಮುಂಗಾರು ಬಿತ್ತನೆಗೆ ರೈತರಿಗೆ ಅಗತ್ಯವಾದ ಗೊಬ್ಬರ,ಬೀಜದ ದಾಸ್ತಾನು ಪರಿಶೀಲಿಸಿದರು.