ಕೊಪ್ಪಳ 26: ಬಡವರು, ಅನಾಥರು, ನಿರ್ಗತಿಕರು ಮತ್ತು ವಸತಿ ರಹಿತರಿಗೆ ಸೂರು ಒದಗಿಸಿ ಎಂದು ವಸತಿ ಸಚಿವ ವಿ. ಸೋಮಣ್ಣ ಅಧಿಕಾರಿಗಳಿಗೆ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ವಸತಿ ಯೋಜನೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮ ಮಟ್ಟದಲ್ಲಿ ಅನೇಕ ಜನರು ವಸತಿ ರಹಿತರಿದ್ದಾರೆ. ಅಂತಹವರನ್ನು ಗುರುತಿಸಿ ಅರ್ಹ ಫಲಾನುಭವಿಗೆ ವಸತಿ ಯೋಜನೆಗಳ ಸೌಲಭ್ಯ ತಲುಪಿಸಿ. ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಯಾವುದೇ ಜನಪ್ರತಿನಿಧಿಗಳ ಅಥವಾ ಪ್ರಭಾವಿಗಳ ಒತ್ತಡಕ್ಕೆ ಒಳಗಾಗದೆ ಸರ್ಕಾರದ ಸೌಲಭ್ಯವನ್ನು ಅರ್ಹ ಬಡ ಜನರಿಗೆ ತಲುಪಿಸಿ. ತಾಲ್ಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳಿಂದ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿ ವಾಸ್ತವಾಂಶವನ್ನು ಸಂಗ್ರಹಿಸಿ ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಿಗೆ ವಾಸ್ತವ ದತ್ತಾಂಶಗಳ ವರದಿ ಸಲ್ಲಿಸಿ. ಯಾವುದೇ ಬೇಜವಾಬ್ದಾರಿ ವರ್ತನೆ, ಅಕ್ರಮಗಳನ್ನು ಸಹಿಸುವುದಿಲ್ಲ. ಅಕ್ರಮದಲ್ಲಿ ಪಾಲ್ಗೊಂಡ ಅಧಿಕಾರಿ ಕುರಿತು ಮಾಹಿತಿ ದೊರೆತಲ್ಲಿ ತಕ್ಷಣವೇ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಆದ್ದರಿಂದ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಕಾರ್ಯ ನಿರ್ವಹಿಸಿ ಎಂದು ಹೇಳಿದರು.
ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮ ಅದಾಲತ್ ಹಾಗೂ ಗ್ರಾಮಸಭೆಗಳನ್ನು ಆಯೋಜಿಸಬೇಕು. ಪ್ರತಿ ತಿಂಗಳು ಒಂದೊಂದು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸಭೆ ನಡೆಸಿ ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಉಪವಿಭಾಗಾಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಕೂಡ ಗ್ರಾಮಸಭೆಯನ್ನು ನಡೆಸಿ ಸಕರ್ಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ನಗರದಲ್ಲಿ ವಸತಿ ಇಲಾಖೆಯಿಂದ 2 ಸಾವಿರ ಮನೆಗಳ ನಿರ್ಮಾಣ ಹಾಗೂ ಹಂಚಿಕೆ ಕುರಿತು ಅಗತ್ಯ ದಾಖಲೆಗಳೊಂದಿಗೆ ಸಂಪೂರ್ಣ ವಿವರಗಳನ್ನು ನೀಡಿದರೆ ಅದಕ್ಕೆ ಬೇಕಾಗುವ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ವಸತಿ ಹಂಚಿಕೆ ಮೂಲಕ ನಗರದಲ್ಲಿ ವಸತಿ ರಹಿತರಿಗೆ ಸೂರು ಒದಗಿಸುವಲ್ಲಿ ಕೊಪ್ಪಳ ನಗರ ಮಾದರಿ ನಗರವಾಗಬೇಕು. ಸರ್ಕಾರದ ವಿವಿಧ ಸೌಲಭ್ಯಗಳನ್ನು ಬಡವರಿಗೆ, ಅರ್ಹರಿಗೆ ತಲುಪಿಸುವಲ್ಲಿ ಈ ಜಿಲ್ಲೆಯು ಮಾದರಿ ಜಿಲ್ಲೆಯಾಗಬೇಕು ಎಂದು ಅವರು ಹೇಳಿದರು.
ಗುಳೆ ಹೋಗುವ ಬಡಜನರ ಮಕ್ಕಳಿಗಾಗಿ ವಿಶೇಷ ಕೌಶಲ್ಯ ತರಬೇತಿಯನ್ನು ನೀಡುವ ಕುರಿತು ಕರ್ನಾಟಕದ ನಾಲ್ಕರಿಂದ ಐದು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಅದರಲ್ಲಿ ಕೊಪ್ಪಳವೂ ಒಂದಾಗಿದೆ. ಆಯ್ಕೆಯಾದ ಜಿಲ್ಲೆಗಳಲ್ಲಿ 2 ರಿಂದ 3 ಸಾವಿರ ಜನರಿಗೆ ಕೌಶಲ್ಯ ತರಬೇತಿ ನೀಡಲಾಗುವುದು. ಮತ್ತು ಇಡೀ ರಾಜ್ಯದಲ್ಲಿ ಪ್ರತಿ ವರ್ಷ 50 ಸಾವಿರ ಜನರಿಗೆ ಈ ತರಬೇತಿಯನ್ನು ನೀಡುವುದರ ಜೊತೆಗೆ ತರಬೇತಿಯ ನಂತರ ಅವರಿಗೆ 10 ರಿಂದ 15 ಲಕ್ಷದವರೆಗೂ ಸ್ವಯಂ ಉದ್ಯೋಗಕ್ಕಾಗಿ ಸಹಾಯಧನ ನೀಡಲಾಗುವುದು. ಈ ಯೋಜನೆಯು ಮಾಚರ್್ ತಿಂಗಳಿನಿಂದ ಜಾರಿ ಮಾಡುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಸಂಸದರಾದ ಸಂಗಣ್ಣ ಕರಡಿ, ಶಾಸಕರಾದ ಬಸವರಾಜ ದಢೇಸೂಗೂರು, ವಸತಿ ಇಲಾಖೆ, ಬೆಂಗಳೂರಿನ ವ್ಯವಸ್ಥಾಪಕ ಮಹದೇವ ಪ್ರಸಾದ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಉಪವಿಭಾಗಾಧಿಕಾರಿ ಸಿ.ಡಿ.ಗೀತಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ದರಾಮೇಶ್ವರ, ನಗರಸಭೆ ಪೌರಾಯುಕ್ತ ಮಂಜುನಾಥ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.