ಗದಗ : ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಳದಿಂದ ನವೀಲುತೀರ್ಥ ಜಲಾಶಯದಿಂದ 22 ಸಾವಿರ ಕ್ಯೂಸೆಕ್ಸ ನೀರು ಹೊರಬಿಡಲಾಗುತ್ತಿದ್ದು ನೀರಿನ ಹೊರ ಹರಿವಿನ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆವಿದ್ದು ಹಾಗೂ ಬೆಣ್ಣಿಹಳ್ಳದ ಪ್ರವಾಹದಿಂದಾಗಿ ನರಗುಂದ ತಾಲೂಕಿನ ಕೊಣ್ಣೂರು, ಹದಲಿ, ವಾಸನ, ಕಪಲಿ, ಬೂದಿಹಾಳ, ಬೆಳ್ಳೆರಿ, ಕುರ್ಲಗೇರಿ ಸುರಕೋಡ ಗ್ರಾಮಗಳು ಜಲಾವೃತಗೊಳ್ಳುವ ಸಂಭವವಿದ್ದು ಅವಶ್ಯಕ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು, ಭೂವಿಜ್ಞಾನ, ಅರಣ್ಯ, ಪರಿಸರ ಜೀವಿಶಾಸ್ತ್ರ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ಸೂಚನೆ ನೀಡಿದರು.
ಮಲಪ್ರಭಾ ನದಿ ಹಾಗೂ ಬೆಣ್ಣೆಹಳ್ಳದ ಪ್ರವಾಹದಿಂದಾಗಿ ನೆರೆಹಾವಳಿ ಗೊಳಗಾದ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಸಚಿವರು ಜಲಾವೃತಗೊಂಡಂತಹ ಲಕಮಾಪುರ ಗ್ರಾಮಕ್ಕೆ ರಸ್ತೆ ಸಂಪರ್ಕ ಕಳೆದುಕೊಂಡಿದ್ದು ನೀರಿನಲ್ಲಿ ಸಿಲುಕಿರುವ ಸಂತ್ರಸ್ಥರಿಗೆ ಊಟ, ನೀರು ಹಾಗೂ ಅಗತ್ಯದ ಸೌಕರ್ಯಗಳನ್ನು ಪೂರೈಸಲು ಅವಶ್ಯಕ ಕ್ರಮ ಕೈಗೊಳ್ಳಲು ಸೂಚನೆ ನೀಡಿದ ಅವರು ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಕೂಡಲೆ ಕ್ರಮ ಜರುಗಿಸಲು ಸೂಚಿಸಿದರು. ಮಲಪ್ರಭೆ ನದಿ ನೀರು ಹೊರಹರಿವಿನಿಂದ ಕೊಣ್ಣೂರು ಗ್ರಾಮಕ್ಕೆ ಮತ್ತೆ ನೀರು ನುಗ್ಗುವ ಸಾಧ್ಯತೆಯಿದ್ದು ಸಾರ್ವಜನಿಕರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಿದ ಅವರು ಸಂತ್ರಸ್ಥರಿಗೆ ಗಂಜಿ ಕೇಂದ್ರಗಳನ್ನು ಸ್ಥಾಪಿಸಲು ಸಚಿವರಾದ ಸಿ.ಸಿ.ಪಾಟೀಲ ಸೂಚಿಸಿದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿ.ಪಂ. ಸಿ.ಇ.ಓ ಡಾ. ಆನಂದ ಕೆ. ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿ ಕನಕರೆಡ್ಡಿ, ತಹಶೀಲ್ದಾರ ಯಲ್ಲಪ್ಪ ಗೊಣೆನ್ನವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಸಂದರ್ಭದಲ್ಲಿ ಉಪಸ್ಥಿತರಿದ್ದರು.