ಧಾರವಾಡ 27: ನಗರದ ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಕಚೇರಿ ಎದುರು ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಅಧೀನ ಮಹಾವಿದ್ಯಾಲಯಗಳ ಸಹಾಯಕ/ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನಕ್ಕೆ ಪಾದಾರೆ್ಣ ಮಾಡಿದೆ.
ಈ ಸಂದರ್ಭದಲ್ಲಿ ಕವಿವಿ ಆಡಳಿತ ಮಂಡಳಿ ಧರಣಿ ನಿರತ ಉಪನ್ಯಾಸಕರ ಪ್ರತಿಭಟನೆ ಹಿಂಪಡೆಯುವಂತೆ ಆಗ್ರಹಿಸಿದರು. ಆದರೆ, ಯಾವುದೇ ಬೇಡಿಕೆ ಈಡೇರದೇ ಇರುವುದರಿಂದ ಅತಿಥಿ ಉಪನ್ಯಾಸಕರು ಪ್ರತಿಭಟನೆ ಮುಂದುವರಿಸಲು ನಿರ್ಣಯಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾ ನಿರತ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಮಹದೇವ ಆರೇರ ಅವರು ತೀವ್ರ ಎದೆ ನೋವಿನಿಂದ ಅಸ್ವಸ್ಥಗೊಂಡರು. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ನಿವೃತ್ತ ಶಿಕ್ಷಕ ಹಾಗೂ ಹೋರಾಟಗಾರರು ಆಗಿರುವ ಮೋಹನ ಸಿದ್ಧಾಂತಿ ಮಾತನಾಡಿ, ಕವಿವಿ ಆಡಳಿತ ಮಂಡಳಿ ಅತಿಥಿ ಉಪನ್ಯಾಸಕರಿಗೆ ಅನ್ಯಾಯ ಮಾಡುತ್ತಿದೆ. ಸಪ್ಟೆಂಬರ್ 2022ರಲ್ಲಿ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದರು.
ಹೋರಾಟಗಾರ ಲಕ್ಷ್ಮಣ ಬಕ್ಕಾಯಿ ಮಾತನಾಡಿ, ಉಪನ್ಯಾಸಕರಿಗೆ ಬೆಂಬಲ ಸೂಚಿಸಿದರು. ಸಂಘದ ಅಧ್ಯಕ್ಷ, ಡಾ. ಶರಣು ಮುಷ್ಠಿಗೇರಿ ಮಾತನಾಡಿ, ನಮ್ಮ ಬೇಡಿಕೆಗಳು ಈಡೇರದ ಹೊರತು ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕಳೆದ ಮೂರು ವರ್ಷಗಳಿಂದ ನಮ್ಮ ಬೇಡಿಕೆ ಈಡೇರಿಕೆಗೆ ತಾಳ್ಮೆಯಿಂದ ಇದ್ದೇವೆ. ಆದರೆ ನಮ್ಮ ಬಗ್ಗೆ ಸರ್ಕಾರಕ್ಕೆ ಹಾಗೂ ಕವಿವಿ ಆಡಳಿತ ಮಂಡಳಿಗೆ ಕನಿಕರ ಇಲ್ಲವಾಗಿದೆ ಇದು ನಮಗೆ ಬಹಳ ಬೇಸರ ತರಿಸಿದೆ ಎಂದರು.
ಡಾ.ಮಹದೇವ ಆರೇರ, ಡಾ.ಎಂ.ವೈ.ಬ್ಯಾಲ್ಯಾಳ, ಡಾ.ವಿ.ಪಿ.ಸುಣಗಾರ, ಡಾ.ಮಂಜುನಾಥ ಅಡಿಗಲ್, ಡಾ. ರಂಗಪ್ಪ ಎಂ. ಎನ್, ಡಾ. ರಾಮದಾಸ್ ವಾಗಮೊರೆ, ಡಾ. ಅರುಣಾ ಕಟ್ಟಿ, ಡಾ. ಗಣೇಶ ತರಸೆ, ಡಾ. ಗೀತಾ ಕರಿ, ಡಾ. ಶೀಲಾ ಭಂಡಾರಿ ಸೇರಿದಂತೆ ನೂರಾರು ಉಪನ್ಯಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.