ಸಿಪಿಐ ಮಂಟೂರನ್ನು ಅಮಾನತುಗೊಳಿಸಲು ಆಗ್ರಹಿಸಿ ಪ್ರತಿಭಟನೆ

Protest demanding suspension of CPI Mantoor

ರಾಯಬಾಗ 07: ವಕೀಲರ ಸಂಘದ ಸದಸ್ಯರಾದ ಬಿ.ಎಸ್‌.ಪಾಟೀಲ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವ ಸಿಪಿಐ ಬಿ.ಎಸ್‌.ಮಂಟೂರ ಅವರನ್ನು ಕೂಡಲೇ ಅಮಾನತು ಮಾಡಿ, ನೊಂದ ವಕೀಲರಿಗೆ ವಕೀಲರ ಹಿತ ರಕ್ಷಣೆ ಸಂರಕ್ಷಣೆ ಕಾಯ್ದೆಯಡಿ ನ್ಯಾಯ ದೊರಕಿಸಿ ಕೊಡಬೇಕೆಂದು ವಕೀಲರ ಸಂಘದ ಸದಸ್ಯರು ಮಂಗಳವಾರ ಪಟ್ಟಣದ ಝೇಂಡಾ ಕಟ್ಟೆ ಹತ್ತಿರ ಮುಖ್ಯ ರಸ್ತೆ ಬಂದ ಮಾಡಿ ಪ್ರತಿಭಟನೆ ನಡೆಸಿದರು.  

ನಂತರ ತಹಶೀಲ್ದಾರ ಸುರೇಶ ಮುಂಚೆ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ವಕೀಲರ ಸಂಘದ ಅಧ್ಯಕ್ಷ ಪಿ.ಎಮ್‌.ದರೂರ ಮಾತನಾಡಿ, ತಾಲೂಕಿನ ಕಟಕಭಾವಿ ಗ್ರಾಮದ ವಕೀಲರಾದ ಬಿ.ಎಸ್‌.ಪಾಟೀಲ ಅವರ ಮೇಲೆ ಅದೇ ಗ್ರಾಮದ ಕೆಲ ದುಷ್ಕರ್ಮಿಗಳು ಜ.1 ರಂದು ಹಲ್ಲೆ ನಡೆಸಿದ್ದರು. ತೀವ್ರ ಗಾಯಗೊಂಡಿದ್ದ ವಕೀಲರು ರಾಯಬಾಗ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಮರುದಿನ ದೂರು ದಾಖಲಿಸಲು ಹೋದಾಗ ಸಿಪಿಐ ಅವರು ದೂರು ತೆಗೆದುಕೊಳ್ಳದೇ ವಕೀಲರನ್ನು ವಾಪಸ್ ಕಳುಹಿಸಿದ್ದಾರೆ. ಈ ವಿಷಯವಾಗಿ ಸಂಘಕ್ಕೆ ಮನವಿ ಕೊಟ್ಟ ನಂತರ ವಕೀಲರ ಸಂಘದ ಸುಮಾರು 30 ವಕೀಲರು ದೂರು ನೀಡಲು ಹೋದಾಗ ಅವರನ್ನು 3-4 ಗಂಟೆವರೆಗೆ ಪೊಲೀಸ ಠಾಣೆ ಹೊರಗೆ ನಿಲ್ಲಿಸಿ ವಕೀಲರಿಗೆ ಅವಮಾನ ಮಾಡಿದ್ದಾರೆ ಎಂದೂ ಆರೋಸಿದರು. ಘಟನೆ ಬಗ್ಗೆ  ಗ್ರಾಮ ಪಂಚಾಯತ ಮುಂದೆ ಇರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ ತೋರಿಸಿದ ನಂತರ ಪ್ರಕರಣ ದಾಖಲಿಸಿದ್ದರು, ಇನ್ನುವರೆಗೆ ಆರೋಪಿಗಳನ್ನು ಬಂಧಿಸಿರುವುದಿಲ್ಲ. ಅಲ್ಲದೇ ಸಿಪಿಐ ಅವರು ಆರೋಪಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ವಕೀಲರಾದ ಬಿ.ಎಸ್‌.ಪಾಟೀಲ ಅವರ ಮೇಲೆ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಿ, ವಕೀಲರನ್ನು ಬಂಧಿಸುವುದಾಗಿ ಹೇಳಿದ್ದಾರೆ ಎಂದು ಆರೋಪಿಸಿದರು. ರಾಯಬಾಗ ಸಿಪಿಐ ಅವರು ಈ ಪ್ರಕರಣದಲ್ಲಿ ಸ್ವತಃ ಮುತುವರ್ಜಿ ವಹಿಸುತ್ತಿರುವುದರಿಂದ ಪೊಲೀಸ ಹುದ್ದೆಯ ಘನತೆಗೆ ಅಗೌರವ ಸಲ್ಲಿಸುತ್ತಿದ್ದಾರೆ. ಜೊತೆಗೆ ಈಗಿನ ರಾಯಬಾಗ ಸಿಪಿಐ ಅವರು ರಾಯಬಾಗ ತಾಲೂಕಿನವರಾಗಿದ್ದರಿಂದ ತಮಗೆ ಬೇಕಾದ ವ್ಯಕ್ತಿಗಳ ಪರವಾಗಿ ಕೆಲಸ ಮಾಡುತ್ತಿರುವುದು ಖಂಡನೀಯವಾಗಿದೆ ಎಂದರು.ವಕೀಲರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣ ರದ್ದುಗೊಳಿಸಿ, ನೊಂದ ವಕೀಲರಿಗೆ ನ್ಯಾಯ ಒದಗಿಸಬೇಕು. ಹಾಗೂ ರಾಯಬಾಗ ಸಿಪಿಐ ಅವರನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.ನಮ್ಮ ಮನವಿಗೆ ಸ್ಪಂದಿಸದಿದ್ದರೆ ವಕೀಲರ ಸಂಘವು ಅನಿರ್ದಿಷ್ಟ ಮುಷ್ಕರ ಕೈಗೊಂಡು, ರಾಜ್ಯಾದ್ಯಂತ ಉಗ್ರ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.ಹಿರಿಯ ವಕೀಲರಾದ ಎ.ಬಿ.ಮಂಗಸೂಳೆ, ಆರ್‌.ಎಸ್‌.ಶಿರಗಾಂವೆ, ಆರ್‌.ಎಚ್‌.ಗೊಂಡೆ, ಟಿ.ಕೆ.ಶಿಂಧೆ, ಎಸ್‌.ಕೆ.ರೆಂಟೆ, ಆರ್‌.ಎಮ್‌.ಹೆಗಡೆ, ಆರಿ​‍್ಟ.ನಾಗರಾಳೆ, ಬಿ.ಬಿ.ಈಟಿ ಮಾತನಾಡಿದರು. 

ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಎಸ್‌.ಬಿ.ಬಿರಾದಾರಪಾಟೀಲ, ಖಜಾಂಚಿ ಯು.ಎನ್‌.ಉಮ್ರಾಣಿ,  ಎಮ್‌.ಪಿ.ತೇಲಿ, ಎಮ್‌.ಜಿ.ಉಗಾರೆ, ಎಮ್‌.ಎಮ್‌.ಚಿಂಚಲಿಕರ, ಆರ್‌.ಎ.ಗೆನ್ನೆನ್ನವರ, ಜಿ.ಎಸ್‌.ಪವಾರ, ಕೆ.ಆರ್‌.ಕೊಟಿವಾಲೆ, ಪಿ.ಆರ್‌.ಗುಡೋಡಗಿ, ವಿ.ಎಮ್‌.ಗಲಗಲಿ, ಎ.ಬಿ.ನಡೋಣಿ, ಎಲ್‌.ಆರ್‌.ಪಡತರೆ, ಆರ್‌.ಎಚ್‌.ನಾಗರಮುನ್ನೋಳ್ಳಿ, ಆರ್‌.ಎಸ್‌.ಬುಗಡಿಗಟ್ಟಿ, ಬಿ.ಎಮ್‌.ಮುಲ್ಲಾ, ಎ.ಬಿ.ನಾಗರಾಳೆ, ಎಸ್‌.ಸಿ.ದೀಕ್ಷಿತ, ಎಸ್‌.ವಿ.ಸಂಗೋಟೆ ಸೇರಿ ಅನೇಕರು ಪಾಲ್ಗೊಂಡಿದ್ದರು.