ದೇವದಾಸಿ ಮಹಿಳೆಯರ ಮನೆ ಮನೆಗೆ ತೆರಳಿ ಮರು ಗಣತಿಯನ್ನು ನಡೆಸಲು ಒತ್ತಾಯ
ಬಳ್ಳಾರಿ 08: ದೇವದಾಸಿ ಮಹಿಳೆಯರ ಮನೆ ಮನೆಗೆ ತೆರಳಿ ಮರು ಗಣತಿಯನ್ನು ನಡೆಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಸಂಡೂರು ತಾಲೂಕು ಘಟಕ ಮನವಿ ಮಾಡಿದೆ. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಕೆಳೆದ ಎರಡು - ಮೂರು ದಶಕಗಳಿಂದ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಸಮಿತಿಯ ಹಾಗೂ ಮಹಿಳೆಯರ ನಿರಂತರ ಮನವಿ ಹಾಗೂ ಒತ್ತಾಯದ ಮೇರೆಗೆ ರಾಜ್ಯ ಸರಕಾರ ತಡವಾಗಿಯಾದರೂ ಸಕಾರಾತ್ಮಕವಾಗಿ ಸ್ಪಂದಿಸಿ ದೇವದಾಸಿ ಮಹಿಳೆಯರ ಕುಟುಂಬದ ಮರುಗಣತಿಗೆ ಕ್ರಮವಹಿಸಿರುವುದನ್ನು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘವು ಹೃತ್ತೂರ್ವಕವಾಗಿ ಸ್ವಾಗತಿಸುತ್ತವೆ.
ಇದೊಂದು ಐತಿಹಾಸಿಕ ಕ್ರಮವಾಗಿದ್ದು ಇದಕ್ಕಾಗಿ ತಮಗೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘವು ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಆದರೆ, ಮರುಗಣತಿಯನ್ನು ದೇವದಾಸಿ ಮಹಿಳೆಯರ ಮನೆಮನೆಗೆ ತೆರಳಿ ಮಾಡುವಂತೆ ಆಗತ್ತು ಕ್ರಮವಹಿಸಬೇಕು ಈ ಹಿಂದೆ ಇಂತಹ ಗಣತಿಗಾಗಿ ತೊಡಗಿಸಿಕೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ನೌಕರರ ಮೂಲಕ ಗಣತಿಗೆ ಕ್ರಮವಹಿಸುವಂತೆ ಈ ಮೂಲಕ ಮನವಿ ಮಾಡುತ್ತೇವೆ ಇದನ್ನು ತಾಲೂಕಾ ಮಟ್ಟದಲ್ಲಿಯೋ, ಅಥವಾ ಗ್ರಾಮ ಪಂಚಾಯತ್ ಮಟ್ಟದಲ್ಲಿಯೋ ನಡೆಸುವುದು ಸಾಧುವಲ್ಲಾ! ಹಾಗೆ ಮಾಡುವುದು ತೀವ್ರ ಭ್ರಷ್ಟಾಚಾರಕ್ಕೆ ಮತ್ತು ದೇವದಾಸಿ ಮಹಿಳೆಯರಲ್ಲದ ಬೇರೆಯ ವ್ಯಕ್ತಿಗಳು ಸೇರಲು ಕಾರಣವಾಗುತ್ತದೆ ಇಡೀ ದೇವದಾಸಿ ಮಹಿಳೆಯರ ಕುಟುಂಬದ ಎಲ್ಲ ಸದಸ್ಯರು ಗಣತಿಗೆ ದೊರೆಯ ಬೇಕಾದುದರಿಂದ ಅವರೆಲ್ಲರನ್ನು ಬೇರೊಂದು ಸ್ಥಳಗಳಿಗೆ ಕರೆಸಿ ಗಣತಿಗೆ ಕ್ರಮವಹಿಸುವುದು ಆ ಕುಟುಂಬಗಳಿಗೆ ತೊಂದರೆದಾಯಕವಾಗಿದೆ.
ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಅಂಗನವಾಡಿ ಕಾರ್ಯಕರ್ತರಿಗೆ ತರಬೇತಿ ನೀಡಿ ಅವರ ಮೂಲಕವೇ ಮನೆ ಮನೆಗೆ ತೆರಳಿ ಅವರ ಮನೆಯ ಮುಂದೆಗಡೆಯೇ ಗಣತಿ ಮಾಡುವುದು ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಸೇರಿದಂತೆ ಅನೇಕರು ದೇವದಾಸಿ ಮಹಿಳೆಯರು ಆಗಮಿಸಿದ್ದರು.