ಬೀಳಗಿ 14: ಅನ್ಯ ರಾಜ್ಯದ ಕಳ್ಳ ವ್ಯಾಪಾರಿಗಳಿಂದ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಮತ್ತು ಕನ್ನಡ ಸಂಸ್ಕೃತಿಗೆ ಉಂಟಾಗುತ್ತಿರುವ ಧಕ್ಕೆಯನ್ನು ಖಂಡಿಸಿ, ದಿ.16 ಸೋಮವಾರ ಬೆ.6ರಿಂದು ಮರು ದಿನ 6ರವರೆಗೆ ಬೀಳಗಿ ಬಂದ್‌ಗೆ ಅನ್ಯ ರಾಜ್ಯ ವ್ಯಾಪಾರಿ ಹಠಾವೋ, ಬೀಳಗಿ ಬಚಾವೋ ಸಂಘಟನೆಯ ಅಧ್ಯಕ್ಷ ಪ್ರವೀಣ್ ಪಾಟೀಲ್ ಕರೆ ನೀಡಿದ್ದಾರೆ.
ಪಟ್ಟಣದ ಜೆಎಲ್ಬಿಸಿ ಪ್ರವಾಸಿ ಮಂದಿರದಲ್ಲಿ ಶನಿವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಸಮಸ್ತ ಬೀಳಗಿ ತಾಲೂಕಿನ ಹಿರಿಯರು, ನಾಗರಿಕರು, ವ್ಯಾಪಾರಸ್ಥರು ಮತ್ತು ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಸೇರಿ
ಅನ್ಯರಾಜ್ಯ ಕಳ್ಳ ವ್ಯಾಪಾರಿಗಳನ್ನು ತೊಲಗಿಸಿ, ಬೀಳಗಿ ಉಳಿಸಿ ಚಳುವಳಿ ಹಮ್ಮಿಕೊಂಡಿದ್ದು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಬಸವೇಶ್ವರ ವೃತ್ತದಲ್ಲಿ ಬೆಳಗ್ಗೆ 8ಗಂಟೆಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು ಎಂದ ಅವರು ಬೀಳಗಿ ಪಟ್ಟಣ ಹಾಗೂ ತಾಲೂಕಿನಲ್ಲಿ ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿ ಇಲ್ಲಿಯೇ ವಾಸವಿದ್ದು ಜನಸಾಮಾನ್ಯರ ಉದ್ಯೋಗವನ್ನು ಕಸಿದುಕೊಳ್ಳುವ ಹಾಗೂ ಬೀಳಗಿ ಪಟ್ಟಣದ ಮುಗ್ಧ ಜನರನ್ನು ಬಳಸಿಕೊಂಡು, ಕನ್ನಡದ ಸಂಸ್ಕೃತಿಗೂ ಕೂಡ ಧಕ್ಕೆ ತರುವ ಬೀಳಗಿ ವ್ಯಾಪಾರಸ್ಥರನ್ನೆ ಊರು ಬಿಟ್ಟು ದುಡಿಯಲು (ಗುಳೆ ಹೋಗುವ) ತೊಲಗಿಸುವ ಹುನ್ನಾರದ ಕಾರ್ಯ ಅನ್ಯರಾಜ್ಯ ವ್ಯಾಪಾರಸ್ಥರಿಂದ ನಡೆಯುತ್ತಿದೆ ಎಂದು ಆರೋಪಿಸಿದರು.
ಆಲಮಟ್ಟಿ ಜಲಾಶಯದ ಹಿನ್ನಿರಿನಿಂದ ಈಗಾಗಲೇ ಬೀಳಗಿ ತಾಲೂಕಿನ ಅನೇಕ ಗ್ರಾಮಗಳ ಆಸ್ತಿ-ಪಾಸ್ತಿ ಜತೆಗೆ ಗ್ರಾಮದಲ್ಲಿ ನಂಬಿಕೊಂಡು ತಲೆತಲಾಂತರದಿಂದ ಮಾಡುತ್ತ ಬಂದಿದ್ದ ಉದ್ಯೋಗ ಕಳೆದುಕೊಂಡು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಬೀಳಗಿ ಪಟ್ಟಣ ಮತ್ತು ತಾಲೂಕಿನ ಮುಖ್ಯ ಗ್ರಾಮಗಳಲ್ಲಿ ಅನ್ಯರಾಜ್ಯ ವ್ಯಾಪಾರಸ್ಥರಿಂದ ಎಲ್ಲ ರೀತಿಯ ವ್ಯಾಪಾರಗಳಲ್ಲಿ ಮಾರುಕಟ್ಟೆ ದರ ವ್ಯತ್ಯಾಸ ಮಾಡಿಕೊಂಡಂತೆ ನಾಟಕವಾಡಿ ನಿತ್ಯ ಜನರಿಗೆ ಮೋಸ ಮಾಡುತ್ತಿದ್ದಾರೆ. ತುಂಬಾ ದೊಡ್ಡ ಮಟ್ಟದ ಅಂಗಡಿಗಳಿಗೆ ಲಕ್ಷಾಂತರ ಡಿಪಾಸಿಟ್ ಹಾಗೂ ಬಾಡಿಗೆ ನೀಡುವ ಮೂಲಕ ವ್ಯಾಪಾರಸ್ಥರ ಉದ್ಯೋಗ ಮತ್ತು ವ್ಯಾಪಾರಸ್ಥರಿಗೆ ಅಂಗಡಿಗಳು ಸಿಗದಂತೆ ವಾತಾವರನ ನಿರ್ಮಿಸಿದ್ದಾರೆ. ಬಡವರು ವ್ಯಾಪಾರ ಮಾಡದಂತಾಗಿದೆ. ಬೀಳಗಿಯಲ್ಲಿನ ವ್ಯಾಪಾರಸ್ಥರಿಗೆ ವ್ಯಾಪಾರ ಇಲ್ಲದಂತೆ ಮಾಡುತ್ತಿದ್ದಾರೆ. ಬಡ್ಡಿ ಆಮಿಷ್ಯ ಒಡ್ಡಿ ಪಟ್ಟಣದ ಸಾಕಷ್ಟು ಜನರ ಮತ್ತು ಮಹಿಳೆಯರ ಹತ್ತಿರ ಹಣ ಪಡೆದು ಇಲ್ಲಿಂದ ಪರಾರಿಯಾಗಿರುವ ಅನೇಕ ಘಟನೆಗಳು ನಡೆದಿವೆ. ಅನ್ಯರಾಜ್ಯ ವ್ಯಾಪಾರಸ್ಥರು ಶಾಶ್ವತವಲ್ಲ ಯಾವಾಗ ಊರು ಬಿಟ್ಟು ಎಲ್ಲರನ್ನು ಮೋಸ ಮಾಡಿ ಹೊಗುತ್ತಾರೆ ಎಂಬುದು ತಿಳಿಯುತ್ತಿಲ್ಲ. ಇದೇ ರೀತಿ ಮುಂದುವರೆದರೆ ಮೂಲ ವ್ಯಾಪಾರಿಗಳಾದ ಬೀಳಗಿ ವ್ಯಾಪಾರಸ್ಥರು ಬೀದಿಗೆ ಬರುವುದು ಅಷ್ಟೆ ಅಲ್ಲ ಅವರ ಅಂಗಡಿಗಳಲ್ಲಿ ಕೆಲಸಕ್ಕೆ ಹೋಗುವ ಸನ್ನಿವೇಶ ನಿರ್ಮಾಣವಾಗಬಹುದು.
ಅದಕ್ಕಾಗಿ ಹಿಂದೆ ಬೀಳಗಿ ಹಿರಿಯರು ಸೇರಿಕೊಂಡು ಹೊರ ರಾಜ್ಯ ವ್ಯಾಪಾರಿಗಳಿಗೆ 2014 ರಲ್ಲಿ ಹೋರಾಟ ಮಾಡಿ ಮುಂದೇ ಯಾರು 1ಕ್ಕಿಂತ ಹೆಚ್ಚು ಅಂಗಡಿ ಮಾಡಬಾರದೆಂದು ಒಪ್ಪಂದ ಮಾಡಿಕೊಂಡಿದ್ದು, ಹಾಗೂ 2014ರ ಮೇಲೆ ಬೇರೆ ಯಾರೂ ಬರಬಾರದೆಂದು ಒಪ್ಪಂದ ಕೂಡ ಆಗಿತ್ತು, ಆದರೂ ಕೂಡ ಮತ್ತೇ ಒಪ್ಪಂದ ಮೀರಿ ಸುಮಾರು 10ಕ್ಕಿಂತ ಹೆಚ್ಚು ಅಂಗಡಿಗಳು ಬೇರೆ ರಾಜ್ಯಗಳಿಂದ ಬಂದಿವೆ. ಪಟ್ಟಣ ಹಾಗೂ ತಾಲೂಕಿನ ಗಣ್ಯರು. ಹಿರಿಯರು, ವ್ಯಾಪಾರಸ್ಥರು, ಕನ್ನಡಪರ ಸಂಘಟನೆಗಳು ಸೇರಿಕೊಂಡು ಬೇರೆ ರಾಜ್ಯಗಳಿಂದ ಬಂದ ವ್ಯಾಪಾರಸ್ಥರಿಗೆ ಅಂತ್ಯ ಹಾಡಬೇಕು. ಸ್ವಯಂ ಪ್ರೇರಿತರಾಗಿ ಶ್ರೀ ಬಸವೇಶ್ವರ ವೃತ್ತದಿಂದ ತಹಶೀಲ್ದಾರ ಕಛೇರಿವರೆಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕಾಗಿ ಎಂದು ವಿನಂತಿಸಿಕೊಂಡಿದ್ದಾರೆ.
ಈ ವೇಳೆ ಆನಂದ್ ಬಿರಾದಾರ, ಆನಂದ್ ಮಂಟೂರ್, ಮಲ್ಲನಗೌಡ ನೀಲಪ್ಪನವರ್, ನಾಗರಾಜ ಟಂಕಸಾಲಿ, ಆನಂದ ಮುಳವಾಡ, ಹಣಮಂತ ಹತ್ನಳ್ಳಿ, ಡಾ.ಸುಭಾಸ್ ನೀರಲಿ, ಸಿದ್ದು ಗಡದ, ಮೈಬೂಬ್ ಜಮಖಂಡಿ, ಮೈಬೂಬ್ ಬಾಗವಾನ ಇದ್ದರು.