ಬೆಂಗಳೂರು, ಮೇ 23,ಹೊರರಾಜ್ಯದ ಯುವತಿಯರನ್ನು ಉದ್ಯೋಗ ಕೊಡಿಸುವ ನೆಪದಲ್ಲಿ ತಂದು ವೇಶ್ಯವಾಟಿಕೆ ದಂಧೆಗೆ ದೂಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ, ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ.ಶಿವಕುಮಾರ್ (31), ರಂಗಸ್ವಾಮಿ (51) ಬಂಧಿತ ಆರೋಪಿಗಳು.ಮಾರತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೋಮ್ ಟೌನ್ ಪಕ್ಕದ ಬಾಡಿಗೆ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಗುರುವಾರ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ದಾಳಿ ಸಂದರ್ಭದಲ್ಲಿ ವೇಶ್ಯಾವಾಟಿಕೆ ಗೃಹಕ್ಕೆ ಗಿರಾಕಿ ಬಂದಿದ್ದ ನಾಜಿಮ್ ವುದ್ದೀನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಹೊರರಾಜ್ಯದ ಯುವತಿಯರನ್ನು ಉದ್ಯೋಗ ಕೊಡಿಸುವ ನೆಪದಲ್ಲಿ ಕರೆ ತಂದು ವೇಶ್ಯವಾಟಿಕೆ ದಂಧೆಗೆ ದೂಡಿ, ಅಕ್ರಮವಾಗಿ ಆರೋಪಿಗಳು ಹಣ ಸಂಪಾದನೆ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಬಂಧಿತರಿಂದ 3 ಮೊಬೈಲ್ ಫೋನ್, 2,910 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಪ್ರಕರಣದ ಮುಖ್ಯ ಆರೋಪಿ ಸ್ವಾತಿ (36) ತಲೆಮರೆಸಿಕೊಂಡಿದ್ದು, ಆಕೆಯ ಪತ್ತೆಗಾಗಿ ಬಲೆ ಬೀಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಾರತ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.