ಬಾಲ್ಯವಿವಾಹವನ್ನು ತಡೆಗಟ್ಟುವಲ್ಲಿ ನಿಷೇದಾಧಿಕಾರಿಗಳು ಜಾಗೃತಿ ವಹಿಸಿ: ಮುರಳಿಮೋಹನ ರೆಡ್ಡಿ

ಬೆಳಗಾವಿ 15: ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಇದನ್ನು ತಡೆಗಟ್ಟುವಲ್ಲಿ ಬಾಲ್ಯ ವಿವಾಹ ನಿಷೇದಾಧಿಕಾರಿಗಳು ಜಾಗೃತಿ ವಹಿಸಬೇಕು. ನಾವೆಲ್ಲರು ಬಾಲ್ಯವಿವಾಹ ತಡೆಗಟ್ಟುವಲಿ ಯಶಸ್ಸುಯಾದರೆ ಮುಂದಿನ ದಿನಮಾನಗಳಲ್ಲಿ ಮಗುವಿನ ಮೇಲೆ ಆಗಬಹುದಾದಂತಹ ದುಷ್ಪರಿಣಾಮಗಳನ್ನು ತಡೆಯಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಹಿರಿಯ ಸಿವ್ಹಿಲ್ ನ್ಯಾಯಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಮುರಳಿಮೋಹನ ರೆಡ್ಡಿ ಅವರು ಹೇಳಿದರು.  

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ ಹಾಗೂ ಶಿಶು ಅಭಿವೃಧ್ಧಿ ಯೋಜನೆ ಬೆಳಗಾವಿ ನಗರ ಇವುಗಳ ಸಹಯೋಗದೊಂದಿಗೆ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಹಾಗೂ ಅಂತರಾಷ್ಟೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಮಹೇಶ್ವರಿ ಅಂಧ ಮಕ್ಕಳ ಸಭಾಂಗಣದಲ್ಲಿ ಮಂಗಳವಾರ (ಅ.15) ಬಾಲ್ಯವಿವಾಹ ನಿಷೇದ ಕಾಯ್ದೆ 2006, ಪೋಕ್ಸೋ ಕಾಯ್ದೆ-2012 ಹಾಗೂ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ-2005 ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಮಕ್ಕಳ ಮೇಲೆ ನಡೆಯುವ ಲೈಂಗಿಕ ಹಾಗೂ ಇತರೇ ಪ್ರಕಾರದ ದೌರ್ಜನ್ಯಗಳನ್ನು ತಡೆಯಲು ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಮಕ್ಕಳಿಗೆ ಸಮಾಲೋಚನೆ ಮತ್ತು ಹಸ್ತಕ್ಷೇಪ ಮುಖಾಂತರ ತಿಳುವಳಿಕೆ ಹೇಳಿ ಜಾಗೃತಿ ಮೂಡಿಸುವುದರಿಂದ ಸಾಕಷ್ಟು ದೌರ್ಜನ್ಯಗಳ ಪ್ರಮಾಣ ಕಡಿಮೆ ಮಾಡಬಹುದು ಎಂದು ಮುರಳಿಮೋಹನ ರೆಡ್ಡಿ ಅವರು ಹೇಳಿದರು.  

ಐ.ಪಿ.ಎಸ್, ಡಿ.ಸಿ.ಪಿ ರೋಹನ ಜಗದೀಶ, ಅವರು ಮಾತನಾಡಿ, ಪ್ರತಿಯೊಂದು ಇಲಾಖೆಯು ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮನೆಯಿಂದಲೇ ಪಾಲಕರು ಮಕ್ಕಳು ವರ್ತನೆಯನ್ನು ಗಮನಿಸಿ ತಿಳುವಳಿಕೆ ನೀಡುವುದರಿಂದ ದೌರ್ಜನ್ಯದ ಪ್ರಕರಣಗಳು ಕಡಿಮೆ ಆಗುವುದೆಂದು ತಿಳಿಸಿದರು.  

ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಉಪನಿರ್ದೇಶಕರು ನಾಗರಾಜ್ ಆರ್ ಅವರು ಮಾತನಾಡಿ, ಬಾಲ್ಯವಿವಾಹ ತಡೆಗಟ್ಟುವಲ್ಲಿ ವಿವಿಧ ಇಲಾಖೆಗಳು ಪ್ರಮುಖ ಪಾತ್ರ ವಹಿಸಿತ್ತವೆ ಇದೇ ನಿಟ್ಟಿನಲ್ಲಿ ಇಂದಿನ ಈ ಕಾರ್ಯಗಾರಕ್ಕೆ ವಿವಿಧ ಇಲಾಖೆಗಳ ಅಧಿಕಾರಿಗಳು ಇಂದಿನ ಈ ಕರ್ಯಾಗಾರಕ್ಕೆ ಆಗಮಿಸಿದ್ದು ಹಾಗೂ ಎಲ್ಲಾ ಧರ್ಮದವರು ಕಾನೂನಿನ ಪ್ರಕಾರ ಗಂಡು ಮಗುವಿಗೆ 21 ಹಾಗೂ ಹೆಣ್ಣು ಮಗುವಿಗೆ 18 ವರ್ಷ ಮುಗಿಯುವವರೆಗೂ ಮದುವೆ ಮಾಡಬಾರದು ಎಂಬ ಈ ವಿಚಾರವನ್ನು ತಮ್ಮ ಧರ್ಮದಲ್ಲಿ ಪ್ರಚಾರ ಮಾಡಿ ತಿಳಿ ಹೇಳಿ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.  

ಬೆಳಗಾವಿ ನಗರದ ಶಿಶು ಅಭಿವೃಧ್ಧಿ ಯೋಜನಾಧಿಕಾರಿಗಳು ರಾಮಮೂರ್ತಿ ಕೆ.ವಿ ಅವರು ಮಾತನಾಡಿ, ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಬಾಲ್ಯವಿವಾಹ ಪ್ರಕರಣಗಳು ಕರೋನದಿಂದ ಹೆಚ್ಚಾಗಿದ್ದು, ಬಾಲ್ಯವಿವಾಹ ತಡೆದ ಪ್ರಕರಣಗಳು ಹೆಚ್ಚಾಗಿದೆ ಎಂದು ಅಂಕಿ ಅಂಶಗಳೊಂದಿಗೆ ಮಾಹಿತಯನ್ನು ತಿಳಿಸಿದರು. 

ಕಾರ್ಯಾಗಾರದಲ್ಲಿ ನ್ಯಾಯವಾದಿಗಳು ಪ್ರತಿಮಾ ಜೋಶಿ, ಮಹಿಳಾ ಕಲ್ಯಾಣ ಇಲಾಖೆಯ ಸಂರಕ್ಷಣಾಧಿಕಾರಿಗಳು ಸುರೇಖಾ ಪಾಟೀಲ ಹಾಗೂ ಕಲ್ಪನಾ ತಮಣ್ಣವರ ಸೇರಿದಂತೆ ಆರೋಗ್ಯ ಇಲಾಖೆ, ಪೋಲಿಸ ಇಲಾಖೆ, ಶಿಕ್ಷಣ ಇಲಾಖೆ, ಮುಜರಾಯಿ ಇಲಾಖೆ, ವಕ್ಪ್‌ ಮಂಡಳಿ ಹಾಗೂ ಇತರರು ಉಪಸ್ಥತರಿದ್ದರು.