ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರೀಶೀಲನೆ
ಕೊಪ್ಪಳ 13:ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ಸಮುದಾಯದ ಅರ್ಹ ಫಲಾನುಭವಿಗಳನ್ನ ಹುಡುಕಿ, ಅವರಿಗೆ ಸರ್ಕಾರಿದಿಂದ ಇರುವ ಸೌಲಭ್ಯ ಒದಗಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಜೈನ, ಸಿಕ್, ಪಾರ್ಸಿ, ಬೌದ್ಧ ಮುಂತಾದ ಸಮುದಾಯಗಳ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಡಿ ವಿವಿಧ ಇಲಾಖೆಗಳ ಯೋಜನೆಗಳಲ್ಲಿ ಶೇ.15 ರಷ್ಟು ಮಿಸಲಾತಿಯನ್ನು ಅಲ್ಪಸಂಖ್ಯಾತರಿಗೆ ನೀಡಬೇಕು. ಈ ಕಾರ್ಯಕ್ರಮದಡಿ ಬರುವ ಎಲ್ಲಾ ಇಲಾಖೆಗಳು ಅರ್ಹ ಫಲಾನುಭವಿಗಳನ್ನ ಗುರುತಿಸಿ, ಅವರಿಗೆ ಮೂಲಭೂತ ಸೌಕರ್ಯಗಳನ್ನ ನೀಡಬೇಕು. ಯೋಜನೆಗಳಡಿ ಆಯಾ ಇಲಾಖೆಗಳು ತಮಗೆ ನೀಡಲಾದ ಗುರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಸಾಮಾಜಿಕ ಮತ್ತು ಅರ್ಥಿಕವಾಗಿ ಸಬಲೀಕರಣಗೊಳಿಸಲು ಸಾಲ ಸೌಲಭ್ಯ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ವೃತ್ತಿಪರ ಕೌಶಲ್ಯ ತರಬೇತಿ ನೀಡಲು ಕ್ರಮ ವಹಿಸಬೇಕು ಎಂದರು.
ನಿವೇಶನ, ಮನೆಗಳ ಹಂಚಿಕೆ, ಗಂಗಾಕಲ್ಯಾಣ, ಸಾಲ ಸೌಲಭ್ಯ, ಸ್ವಯಂ ಉದ್ಯೋಗ ಯೋಜನೆ ಮುಂತಾದ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸುವ ಸಂದರ್ಭದಲ್ಲಿ ನಿಗದಿತ ಗುರಿಯಂತೆ ಅಲ್ಪಸಂಖ್ಯಾತ ಸಮುದಾಯದ ಫಲಾನುಭವಿಗಳಿಗೂ ಪಿ.ಎಂ ಹೊಸ 15 ಅಂಶಗಳ ಕಾರ್ಯಕ್ರಮದಡಿ ಆದ್ಯತೆ ನೀಡಿ ಎಂದು ಹೇಳಿದರು.
ಪೋಸ್ಟರ್ ಬಿಡುಗಡೆ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಿರ್ವಹಣೆಯಾಗುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ 2025-26ನೇ ಸಾಲಿಗಾಗಿ 6ನೇ ತರಗತಿಯ ಪ್ರವೇಶಾತಿ ಪ್ರಕಟಣೆಯ ಪೋಸ್ಟರ್ಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಯಿತು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರೇಷ್ಮಾ ಹಾನಗಲ್, ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಕೊಪ್ಪಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸದಸ್ಯರಾದ ಮಹಮ್ಮದ್ ನಜೀರುದ್ದಿನ್, ಮೆಹಬೂಬ್ ಪಾಶ, ಪ್ರಶಾಂತ ಎಸ್ ದೇಸಾಯಿ, ಸಮೀನಾ ಬೇಗಂ, ಎಂ.ಮದಾರವಲಿ ಸಾಬ್ ಹಾಗೂ ಎಂ.ಡಿ ಸಿರಾಜ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಜ್ಮೀರ ಅಲಿ ಹಾಗೂತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳು ಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.