ಮಂಗಳವಾರದಿಂದ ಖಾಸಗಿ ಬಸ್ ಸಂಚಾರಕ್ಕೆ ಅವಕಾಶ: ಪ್ರಯಾಣ ದರ ಏರಿಕೆ ಇಲ್ಲ: ಸವದಿ

ಬೆಂಗಳೂರು, ಮೇ 18,ರಾಜ್ಯದಲ್ಲಿ ಮಂಗಳವಾರದಿಂದ ಖಾಸಗಿ ಬಸ್ ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸೋಂಕು ನಿಯಂತ್ರಣ ಕ್ರಮಗಳೊಂದಿಗೆ ಕಾರ್ಯಾಚರಣೆ ಮಾಡುವಂತೆ ಸಾರಿಗೆ ಇಲಾಖೆ ಜವಾಬ್ದಾರಿ ಹೊತ್ತಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೂಚಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿನಿಂದ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ವ್ಯಾಪಕ ಹಾನಿಗೊಳಗಾಗಿದ್ದ ಖಾಸಗಿ ಬಸ್ ಗಳ ಮಾಲೀಕರು ಇದೀಗ ಸರ್ಕಾರದ ಮಾರ್ಗಸೂಚಿಯಂತೆ ಬಸ್ ಗಳ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಖಾಸಗಿ ಬಸ್ ಮಾಲೀಕರು ವಾಹನ ತೆರಿಗೆ ವಿನಾಯಿತಿ ನೀಡಬೇಕೆಂದು ಮಾಡಿರುವ ಮನವಿ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಧ್ಯದ ಪರಿಸ್ಥಿತಿಯಲ್ಲಿ ಸಾರಿಗೆ ಸಂಸ್ಥೆ ಬಸ್ ಪ್ರಯಾಣ ದರ ಏರಿಕೆ ಮಾಡುವುದಿಲ್ಲ, ಒಡಿಶಾ ಹಾಗೂ ಹರಿಯಾಣ ರಾಜ್ಯಗಳಲ್ಲಿ ಪ್ರಯಾಣ ದರ ಹೆಚ್ಚಿಸಲಾಗಿದೆ.  ಆದರೆ ಸಾರಿಗೆ ಸಂಸ್ಥೆಗೆ ಉಂಟಾಗುವ ನಷ್ಟ ಭರಿಸುವುದಾಗಿ ಮುಖ್ಯಮಂತ್ರಿ ಅವರು ಭರವಸೆ ನೀಡಿದ್ದಾರೆ. ಪ್ರತಿಯೊಂದು ಬಸ್ ಗಳಲ್ಲಿ 30 ಜನ ಪ್ರಯಾಣಿಕರ ಓಡಾಟಕ್ಕೆ ಮಾತ್ರ ಅವಕಾಶ ನೀಡುತ್ತಿರುವುದರಿಂದ ವ್ಯಾಪಕ ನಷ್ಟವಾಗಲಿದೆ. ಈ ವಿಚಾರ ಸರ್ಕಾರದ ಪರಿಶೀಲನೆಯಲ್ಲಿದೆ ಎಂದಿದ್ದಾರೆ. ಎಲ್ಲಾ ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ, ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು. ಪ್ರತಿಯೊಂದು ಬಸ್ ನಿಲ್ದಾಣಗಳಲ್ಲಿ ಸೋಂಕು ನಿವಾರಕಗಳನ್ನು ಸಿಂಪಡಿಸಲಾಗುವುದು ಎಂದು ಲಕ್ಷ್ಮಣ ಸವದಿ ತಿಳಿಸಿದರು.