ನಾಳೆ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪೃಥ್ವಿ ಶಾ ಪದಾರ್ಪಣೆ

ಹ್ಯಾಮಿಲ್ಟನ್, ಫೆ 4, ನ್ಯೂಜಿಲೆಂಡ್ ವಿರುದ್ಧ ಟಿ-20 ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡ ಬಳಿಕ ಭಾರತ ತಂಡ ನಾಳೆಯಿಂದ ಆರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಗೆ ಸಿದ್ಧತೆ ನಡೆಸುತ್ತಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ನಾಯಕ ವಿರಾಟ್ ಕೊಹ್ಲಿ, ಪೃಥ್ವಿ ಶಾ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ ಎಂದು ಹೇಳಿದ್ದಾರೆ.ಆಸ್ಟ್ರೇಲಿಯಾ ವಿರುದ್ಧ ಕೊನೆಯ ಏಕದಿನ ಪಂದ್ಯದಲ್ಲಿ ಗಾಯಕ್ಕೆ ತುತ್ತಾದ ಶಿಖರ್ ಧವನ್ ನ್ಯೂಜಿಲೆಂಡ್ ಪ್ರವಾಸದಿಂದ ಹೊರಗುಳಿದಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಪೃಥ್ವಿ ಶಾ, ನಾಳೆ ಚೊಚ್ಚಲ ಏಕದಿನ ಪಂದ್ಯವಾಡಲಿದ್ದಾರೆ.ಅನಿರೀಕ್ಷಿತವಾಗಿ ರೋಹಿತ್ ಶರ್ಮಾ ಕೂಡ ಗಾಯದಿಂದಾಗಿ ಏಕದಿನ ಮತ್ತು ಟೆಸ್ಟ್ ಸರಣಿಗಳಿಂದ ಹೊರಗುಳಿದಿದ್ದಾರೆ. ಅವರ ಬದಲು ಮಯಾಂಕ್ ಅಗರ್ವಾಲ್ ಅವರಿಗೆ ಸ್ಥಾನ ಕಲ್ಪಿಸಲಾಗಿದೆ.“ರೋಹಿತ್ ಶರ್ಮಾ ಏಕದಿನ ಸರಣಿಗೆ ಅಲಭ್ಯರಾಗಿರುವುದು ಅನಿರೀಕ್ಷಿತ. ಈ ಸರಣಿಯ ಬಳಿಕ ಭಾರತಕ್ಕೆ ಯಾವುದೇ ಏಕದಿನ ಸರಣಿ ಇಲ್ಲ. ಹಾಗಾಗಿ, ಅವರು ಚೇತರಿಸಿಕೊಳ್ಳಲು ಸಾಕಷ್ಟು ಸಮಯವಿದೆ. ಪೃಥ್ವಿ ಶಾ ಇನಿಂಗ್ಸ್ ಆರಂಭಿಸಲಿದ್ದಾರೆ. ಕೆ.ಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ,’’ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಕಳೆದ ಏಕದಿನ ಸರಣಿ ಕಠಿಣವಾಗಿತ್ತು. ಮೊದಲನೇ ಪಂದ್ಯದಲ್ಲಿ ನಾವು ಸೋಲು ಅನುಭವಿಸಿದ್ದೆವು. ನಂತರ, ಸತತ ಎರಡು ಪಂದ್ಯಗಳಲ್ಲಿ ಗೆದ್ದು 2-1 ಅಂತರದಲ್ಲಿ ಏಕದಿನ ಸರಣಿ ಜಯ ಸಾಧಿಸಿದೆವು. ಈ ಸರಣಿ ನಮ್ಮಲ್ಲಿ ವಿಶ್ವಾಸ ಹೆಚ್ಚಿಸಿದೆ. ನಮ್ಮ ಯೋಜನೆಗಳ ಬಗ್ಗೆ ನಮಗೆ ನಂಬಿಕೆ ಇದೆ. ಆದರೆ, ನ್ಯೂಜಿಲೆಂಡ್ ತಂಡವನ್ನು ಎದುರಿಸುವುದು ಸುಲಭವಲ್ಲ,’’ ಎಂದು ಹೇಳಿದ್ದಾರೆ.