ನವದೆಹಲಿ, ಫೆ.4- ಉಪನಾಯಕ ರೋಹಿತ್ ಶರ್ಮಾ ಗಾಯದಿಂದ ಬಳಲಿದ್ದು, ಕಿವೀಸ್ ಸರಣಿಯಿಂದ ಹೊರಗುಳಿದಿದ್ದಾರೆ. ಟಿ-20 ಸರಣಿ ಕ್ಲೀನ್ ಸ್ವೀಪ್ ಮಾಡಿರುವ ಟೀಮ್ ಇಂಡಿಯಾ ಮತ್ತೊಂದು ಮೈಲುಗಲ್ಲಿನ ನಿರೀಕ್ಷೆಯಲ್ಲಿದೆ.
ಗಾಯದಿಂದಾಗಿ ರೋಹಿತ್ ಏಕದಿನ ಮತ್ತು ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಹ್ಯಾಮಿಲ್ಟನ್‌ನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಪೃಥ್ವಿ ಶಾ ಮತ್ತು ಮಾಯಾಂಕ್ ಅಗರ್ ವಾಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ರಾಹುಲ್ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬ ಬಲ್ಲರು.
ಗಾಯಗೊಂಡ ರೋಹಿತ್ ಬದಲಿಗೆ ಮಯಾಂಕ್ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಶಾ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಗಾಯಗೊಂಡ ಶಿಖರ್ ಧವನ್ ಬದಲಿಗೆ ಪೃಥ್ವಿ ತಂಡ ಸೇರಿದ್ದರು. ರೋಹಿತ್ ಮತ್ತು ಶಿಖರ್ ಇಬ್ಬರೂ ಏಕದಿನ ತಂಡದಿಂದ ಹೊರ ನಡೆದ ಬಳಿಕ ಮತ್ತೊಂದು ಹೊಸ ಆರಂಭಿಕ ಜೋಡಿ ಭಾರತದ ಪರ ಇನ್ನಿಂಗ್ಸ್ ಆರಂಭಿಸಲಿದೆ.
"ಪೃಥ್ವಿ ತಂಡದಲ್ಲಿದ್ದಾರೆ ಮತ್ತು ರೋಹಿತ್ ಬದಲಿಗೆ ಮಾಯಾಂಕ್ ಸ್ಥಾನ ಪಡೆದಿದ್ದಾರೆ. ಏಕದಿನ ಪಂದ್ಯದಲ್ಲಿ ರಾಹುಲ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದು, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ” ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.