ಬೆಂಗಳೂರು, ಫೆ 10, ಮಾರ್ಚ್ 5 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸುತ್ತಿರುವ ರಾಜ್ಯ ಬಜೆಟ್ ನಲ್ಲಿ ಸಣ್ಣ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ ಕಾಸಿಯಾ ಒತ್ತಾಯಿಸಿದೆ. ನಗರದಲ್ಲಿಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಘದ ಅಧ್ಯಕ್ಷ ಆರ್. ರಾಜು ನೇತೃತ್ವದ ನಿಯೋಗ, ಸಣ್ಣ ಕೈಗಾರಿಕೆಗಳು ಸಂಕಷ್ಟದಲ್ಲಿದ್ದು ಈ ವಲಯಕ್ಕೆ ಹೆಚ್ಚು ಸಬ್ಸಿಡಿ, ಸವಲತ್ತುಗಳನ್ನು ಕಲ್ಪಿಸುವಂತೆ ಕೋರಿತು.
ಕಾಸಿಯಾಗೆ ಕೆಐಎಡಿಬಿ, ಕೆ.ಎಸ್.ಎಫ್.ಸಿ ಮತ್ತು ಕೆ.ಎಸ್.ಪಿ.ಸಿ.ಬಿ. ಮಂಡಳಿಗಳಲ್ಲಿ ಪ್ರಾತಿನಿಧ್ಯ ನೀಡಬೇಕು. ಕೈಗಾರಿಕೆಗಳಿಗೆ ಅನುಮೋದನೆ ನೀಡುವ ರಾಜ್ಯ ಮಟ್ಟದ ಸಮಿತಿಯಲ್ಲಿ ಕಾಸಿಯಾ ಸಂಸ್ಥೆಗೆ ವಿಷೇಶ ಆಹ್ವಾನಿತರ ಪ್ರಾತಿನಿಧ್ಯ ಕೊಡಬೇಕು, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ವಿದ್ಯುತ್ ಕಡಿತದ ಆದೇಶದಿಂದ ಆಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಮನವಿ ಮಾಡಿದೆ.
ವಿದ್ಯುತ್, ನೀರು ಸಂಪರ್ಕ ಪಡೆಯಲು ಇರುವ ತೊಡಕುಗಳನ್ನು ನಿವಾರಿಸಬೇಕು. ಕೈಗಾರಿಕಾ ಪ್ರದೇಶಗಳಲ್ಲಿ ರಿಯಾಯಿತಿ ದರದಲ್ಲಿ ಭೂದರ ನಿಗದಿ ಮಾಡಬೇಕು. 2019 -24 ರ ಅವಧಿಗೆ ಹೊಸ ಜವಳಿ ಮತ್ತು ಉಡುಪು ನೀತಿ ಜಾರಿಗೆ ತರಬೇಕು ಎಂದು ಕೋರಿದೆ. ಸೂಕ್ಷ್ಮ ಮತ್ತು ಎಸ್‌ಎಸ್‌ಐಗಳಿಗೆ ಬೆಂಬಲ ನೀಡಲು ಆರ್ಥಿಕ ಪ್ರೋತ್ಸಾಹಧನ ಒದಗಿಸಬೇಕು. ಸೂಕ್ಷ್ಮ ಸಣ್ಣ ಉದ್ಯಮಗಳ ಸೌಲಭ್ಯ ಮಂಡಳಿ (ಎಂಎಸ್‌ಇಎಫ್‌ಸಿ) ರಚಿಸಬೇಕು. ಕೈಗಾರಿಕಾ ಮೂಲಸೌಕರ್ಯಾಭಿವೃದ್ದಿ ಮತ್ತು ರಫ್ತು ಚಟುವಟಿಕೆಗಳಿಗೆ ನೆರವು ಕಲ್ಪಿಸಬೇಕು. ಜಿಲ್ಲೆಗಳ ಖಾಸಗಿ ಕೈಗಾರಿಕಾ ಪ್ರದೇಶಗಳಲ್ಲಿ ಎಸ್‌ಎಂಇಗಳ ಅಭಿವೃದ್ಧಿಗಾಗಿ ಮೂಲಸೌಕರ್ಯಾಭಿವೃದ್ಧಿ ಉನ್ನತೀಕರಣಕ್ಕೆ ನಿಧಿ, ಪ್ರಮುಖ ಕೈಗಾರಿಕಾ ಪ್ರದೇಶಗಳು ಮತ್ತು ಎಸ್ಟೇಟ್‌ಗಳಲ್ಲಿ ಕೈಗಾರಿಕಾ ನಗರ ಪ್ರಾಧಿಕಾರ ರಚನೆ, ಹೊಸ ಕೈಗಾರಿಕಾ ಪ್ರದೇಶಗಳ ಸೃಷ್ಟಿಗೆ ಒತ್ತು ನೀಡಬೇಕು ಎಂದು ಹೇಳಿದರು.
ಖಾಸಗಿ ಬಂಡವಾಳ ಹೂಡಿಕೆದಾರರು ಅಥವಾ ಸಾರ್ವಜನಿಕ, ಖಾಸಗಿ ಸಹಭಾಗಿತ್ವದಡಿ ಕೈಗಾರಿಕಾ ಪ್ರದೇಶಗಳು ಮತ್ತು ವಸಾಹತುಗಳ ಸ್ಥಾಪನೆ, ಕೆಎಸ್‌ಪಿಸಿಬಿಯಿಂದ ಸಿಇಟಿಪಿಗಳ ಸ್ಥಾಪನೆ, ಭೂಮಿ ಪರಿವರ್ತನೆ ಮತ್ತು ಆರ್.ಡಿ.ಪಿ.ಆರ್. ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಮನವಿ ಮಾಡಿದೆ.