ಬೆಂಗಳೂರು, ಮಾ 26, ದೇಶಾದ್ಯಂತ ತೀವ್ರ ಆತಂಕ ಸೃಷ್ಟಿಸಿರುವ ಕೊರೋನಾ ವೈರಸ್ ಮಹಾಮಾರಿ ನಿಯಂತ್ರಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಏಕಾಏಕಿ ಘೋಷಿಸಿರುವ 21 ದಿನಗಳ ಲಾಕ್ ಡೌನ್ ನಿಂದಾಗಿ ಚಾಲಕರು ಮತ್ತವರ ಕುಟುಂಬ ದಿಘ್ಭ್ರಮೆಗೊಳಗಾಗಿದ್ದು, ಮುಂದೇನು ಎನ್ನುವ ಆತಂಕದಲ್ಲಿದೆ ಎಂದು ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ತೀರ್ಮಾನದಿಂದ 21 ಕೋಟಿಗೂ ಹೆಚ್ಚು ಚಾಲಕರು ಮತ್ತವರ ಕುಟುಂಬ ಸದಸ್ಯರು ದಿಕ್ಕಾಪಾಲಾಗಿದ್ದು, ಇಂತಹ ಸಂದರ್ಭದಲ್ಲಿ ಚಾಲಕ ಸಮುದಾಯದ ಬೇಡಿಕೆಗಳನ್ನು ಈಡೇರಿಸಿ ಹಿತರಕ್ಷಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ಲಕ್ಷಾಂತರ ಚಾಲಕರು, ಮತ್ತು ಕುಟುಂಬ ಸದಸ್ಯರಿಂದ ಪತ್ರ ಚಳವಳಿ ಆರಂಭಿಸಲಾಗಿದೆ ಎಂದಿದ್ದಾರೆ. ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಗಂಡಸಿ ಸದಾನಂದ ಸ್ವಾಮಿ, ಈಗಾಗಲೇ ಚಾಲಕರ ಸಂಘದಿಂದ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, ಸಂಘಟನೆಯ 120ಕ್ಕೂ ಹೆಚ್ಚು ಶಾಖೆಗಳಿಂದಲೂ ಪತ್ರ ಬರೆಯಲಾಗುತ್ತಿದೆ. ದೇಶದಲ್ಲಿ ಸುಮಾರು 218,288.000ಕ್ಕೂ ಹೆಚ್ಚು ಲಾರಿ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ವಾಣಿಜ್ಯ ಬಳಕೆ ವಾಹನಗಳ ಚಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದಲ್ಲಿ ಕೊರೋನಾ ವೈರಸ್‍ನ್ನು ಸಂಪೂರ್ಣವಾಗಿ ನಿಯಂತ್ರಣ ಮತ್ತು ನಿರ್ಮೂಲನೆ ಮಾಡುವ ಸಲುವಾಗಿ 21 ದಿನಗಳ ಲಾಕ್‍ಡೌನ್ ವಿಧಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಚಾಲಕರು ತಮ್ಮ ವಾಹನಗಳ ಮೇಲಿನ ಸಾಲದ ಮೇಲಿನ ಮಾಸಿಕ ಕಂತು (ಇಎಂಐ) ಕಟ್ಟುವುದು ಬಹಳ ಕಷ್ಟಕರವಾಗಿದೆ ಎಂದು ಹೇಳಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ನಾವು ಸಾಲದ ಇಎಂಐ ಕಟ್ಟದಿದ್ದಲ್ಲಿ ಬ್ಯಾಂಕ್‍ನಿಂದ ಬಡ್ಡಿ, ಚಕ್ರಬಡ್ಡಿ ಹಾಕುವ ಹಾಗೂ ವಾಹನ ಮುಟ್ಟುಗೋಲು ಹಾಕಿಕೊಳ್ಳುವ ಆತಂಕದಲ್ಲಿ ಚಾಲಕರ ಕುಟುಂಬದ ಕೋಟ್ಯಂತರ ಸದಸ್ಯರು ಬದುಕುತ್ತಿದ್ದಾರೆ. ಇಂತಹ ಸಂದಿಗ್ದ ಸಂದರ್ಭದಲ್ಲಿ ನಾವೆಲ್ಲರೂ ಪ್ರಧಾನಿ ಅವರ ಜತೆ ದೇಶದ ಹಿತ ರಕ್ಷಣೆಗಾಗಿ ಕಟ್ಟಿಬದ್ದರಾಗಿ ನಿಲ್ಲುತ್ತೇವೆ. ನಮಗೆ ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಕಿರುಕುಳವಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈಗ 21 ದಿನಗಳ ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಒಂದೇ ಒಂದು ರೂಪಾಯಿ ದುಡಿಯುವುದು ತೀರ ಕಷ್ಟಕರ. ಆದ್ದರಿಂದ ಈ ಕೂಡಲೇ ಎಲ್ಲಾ ಫೈನಾನ್ಸ್ ಕಂಪನಿಗಳು ಹಾಗೂ ಬ್ಯಾಂಕ್‍ಗಳಿಗೆ ಬಡ್ಡಿ ವಿಧಿಸದಂತೆ ಹಾಗೂ ಇಎಂಐ ಕಟ್ಟಲು ಮೂರು ತಿಂಗಳ ಕಾಲಾವಕಾಶ ಕೊಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಗೆ ಸೂಚನೆ ನೀಡಬೇಕು. ಈ ಕುರಿತು ಸಂಬಂಧಪಟ್ಟ ಬ್ಯಾಂಕ್ ಗಳು, ಹಣಕಾಸು ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಲಾಗಿದೆ ಎಂದು ಗಂಡಸಿ ಸದಾನಂದ ಸ್ವಾಮಿ ತಿಳಿಸಿದ್ದಾರೆ.ಜತೆಗೆ ಪ್ರಧಾನಿ ಮೋದಿ ಅವರು ತಮ್ಮ ಜನಪ್ರಿಯ ಆಕಾಶವಾಣಿಯ ಮನ್‍ಕಿಬಾತ್ ಕಾರ್ಯಕ್ರಮದ ಮೂಲಕ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡು ದೇಶದ ವಾಹನ ಚಾಲಕರಿಗೆ ಧೈರ್ಯ ತುಂಬಬೇಕು ಎಂದು ನಮ್ಮ ಒಕ್ಕೂಟದಿಂದ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.