ಪ್ರಧಾನಿ ಮೋದಿ ಶೀಘ್ರ ಸೌದಿ ಅರೇಬಿಯಾಕ್ಕೆ ಭೇಟಿ

ನವದೆಹಲಿ, ಅ. 5:  ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲಿದ್ದಾರೆ. 

ಈ ಸಂದರ್ಭದಲ್ಲಿ ಅವರು ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಸೇರಿದಂತೆ ಉನ್ನತ ಸೌದಿ ನಾಯಕರ ಜೊತೆ ದ್ವಿಪಕ್ಷೀಯ ಮಾತುಕತೆ  ನಡೆಸುವ ನಿರೀಕ್ಷೆಯಿದೆ. 

ಭೇಟಿಯ ಸಮಯದಲ್ಲಿ, ರಾಜಧಾನಿ ರಿಯಾದ್ನಲ್ಲಿ ಕೊಲ್ಲಿ ರಾಷ್ಟ್ರ ಆಯೋಜಿಸಿರುವ ಹೂಡಿಕೆ ಕುರಿತ ಶೃಂಗಸಭೆಯಲ್ಲಿ ಪ್ರಧಾನಿ ಭಾಗವಹಿಸುವ ಸಾದ್ಯತೆಯಿದೆ ಎನ್ನಲಾಗಿದೆ. 

ಪ್ರಧಾನಿ ಮೋದಿ ಅವರ ಸೌದಿ ಅರೇಬಿಯಾ ಭೇಟಿಯ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಅಥವಾ ದೃಢೀಕರಣ ಇನ್ನು ಹೊರಬಿದ್ದಿಲ್ಲ. 

ಮೂಲಗಳ ಪ್ರಕಾರ, ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಅವರ ಇತ್ತೀಚಿನ ಸೌದಿ ಅರೇಬಿಯಾ ಭೇಟಿಯ ನಂತರ ಈ ತಿಂಗಳ ಕೊನೆಯಲ್ಲಿ  ಪ್ರಧಾನ ಮಂತ್ರಿಯ ಭೇಟಿಗೆ ವೇದಿಕೆ ಸಿದ್ಧಪಡಿಸಲಾಗುತ್ತಿದೆ ಎನ್ನಲಾಗಿದೆ. 

ದೋವಲ್ ದ್ವಿಪಕ್ಷೀಯ ವಿಷಯಗಳ ಜೊತೆಗೆ ಹಲವು ವಿಷಯಗಳನ್ನು ಚರ್ಚಿಸಿದ್ದರು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ  ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಭಾರತದ ನಿರ್ಧಾರದ ಬಗ್ಗೆ ಸೌದಿ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದರು.   

ಇದು ಪ್ರಧಾನಿ ಮೋದಿ ಅವರ ಎರಡನೇ ಪ್ರವಾಸವಾಗಿದೆ. ಈ ಮೊದಲು ಅವರು  2016 ರಲ್ಲಿ ಅಲ್ಲಿಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಲಾಗಿತ್ತು.

ವಿಶ್ವದ ಅತಿದೊಡ್ಡ ತೈಲ ರಫ್ತುದಾರನಾಗಿರುವ ಸೌದಿ ಅರೇಬಿಯಾ, ಸಂಸ್ಕರಣೆ, ಇಂಧನ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ 100 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಮುಂದಾಗಿದೆ.  ದೇಶದ ಅತಿದೊಡ್ಡ ತೈಲ ದೈತ್ಯ ಅರಾಮ್ಕೊ ಸಹ ಭಾರತೀಯ ಕಂಪನಿಗಳೊಂದಿಗೆ ಸಹಭಾಗಿತ್ವ ರೂಪಿಸುತ್ತಿದೆ.