ನವದೆಹಲಿ, ಏ 27, ದೇಶದಲ್ಲಿ ಕೋವಿಡ್-19 ಪರಿಸ್ಥಿತಿ ಮತ್ತು ಲಾಕ್ ಡೌನ್ ವಿಸ್ತರಣೆ ನಿರ್ಧಾರದ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು 40 ದಿನಗಳ ಲಾಕ್ ಡೌನ್ ನಂತರ ಕೋವಿಡ್ ವಿರುದ್ಧ ಭಾರತದ ಹೋರಾಟದ ರೂಪುರೇಷೆ ಕುರಿತು ಚರ್ಚಿಸಿರುವ ನಿರೀಕ್ಷೆಯಿದೆ. ಸಮಯದ ಮಿತಿಯಿಂದ ಕೇವಲ 9 ಮುಖ್ಯಮಂತ್ರಿಗಳಿಗೆ ಮಾತ್ರ ಮಾತನಾಡಲು ಅವಕಾಶದೊರೆತಿದೆ ಎನ್ನಲಾಗಿದೆ. ಇದು ಮಾ. 20 ರ ನಂತರ ಪ್ರಧಾನಿ ಮೋದಿ ಅವರು ನಡೆಸುತ್ತಿರುವ ನಾಲ್ಕನೇ ಸಭೆಯಾಗಿದೆ. ಹಲವರು ರಾಜ್ಯಗಳು ಸೋಂಕು ಕಡಿಮೆಯಿರುವ ಹಾಗೂ ಸುರಕ್ಷಿತ ವಲಯಗಳಲ್ಲಿ ಲಾಕ್ ಡೌನ್ ಸಡಿಲಗೊಳಿಸಬೇಕು ಎಂದು ಮನವಿ ಮಾಡಿವೆ. ಆದರೆ, ಸಾರ್ವಜನಿಕ ಸಭೆಗಳು, ಶೈಕ್ಷಣಿಕ ಸಂಸ್ಥೆಗಳ ಮೇಲೆ ನಿರ್ಬಂಧ ಮುಂದುವರಿಯಬೇಕು, ಆಂತರರಾಜ್ಯ ಸಾರಿಗೆ ನಿಷೇಧಿಸಬೇಕು ಮತ್ತು ಕೇವಲ ವಲಸಿಗ ಕಾರ್ಮಿಕರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಠಿಣವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದ್ದಾರೆ.ಜೊತೆಗೆ, ರಾಜ್ಯಗಳು ಕೇಂದ್ರದಿಂದ ದೊಡ್ಡ ಪ್ರಮಾಣದ ಹಣಕಾಸಿನ ನೆರವು ನಿರೀಕ್ಷಿಸುತ್ತಿವೆ. ಸಭೆಯಲ್ಲಿ ಮುಖ್ಯವಾಗಿ ರಾಜಸ್ತಾನ, ಒಡಿಶಾ, ಛತ್ತೀಸ್ ಗಢ, ಕೇರಳ, ಆಂಧ್ರಪ್ರದೇಶ ಮತ್ತು ಬಿಹಾರದಲ್ಲಿ ಸಿಲುಕಿರುವ ಸಾವಿರಾರು ಕಾರ್ಮಿಕರಿಗೆ ಸೂಕ್ತ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ಚರ್ಚೆಯಾಯಿತು.ಒಂದು ದಿನದ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಮಾಸಿಕ ಬಾನುಲಿ ಕಾರ್ಯಕ್ರಮದಲ್ಲಿ, ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಜನರು ಅತಿಯಾದ ಆತ್ಮವಿಶ್ವಾಸ ಹೊಂದಬಾರದು. ಎಚ್ಚರದಿಂದಿರಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಲೇಬೇಕು ಎಂದು ಎಚ್ಚರಿಕೆ ನೀಡಿದ್ದರು.