ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು ರೈತರಿಗೆ ಅನುಕೂಲವಾಗಿ ಕೆಲಸ ನಿರ್ವಹಿಸಬೇಕು

ಲೋಕದರ್ಶನ ವರದಿ

ರಾಮದುರ್ಗ 19: ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಹಕಾರಿ ಸಂಘಗಳ ಮೂಲಕ  ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ರೈತರಿಗೆ ಸಾಕಷ್ಟು ಅನುಕೂಲತೆ ಮಾಡಿಕೊಟ್ಟಿದ್ದಾರೆ. ರೈತರು ಸಹಕಾರಿ ಸಂಘಗಳಿಂದ ಪಡೆದ ಸಾಲ ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ಪಟ್ಟಣದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ರಾಮದುರ್ಗ ಶಾಖೆಯ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಆಶ್ರಯದಲ್ಲಿ ತಾಲೂಕಿನ ಪಿ.ಕೆ.ಪಿ.ಎಸ್, ಪತ್ತಿನ ಮತ್ತು ನೌಕರರ ಪತ್ತಿನ, ವಿವಿಧ ಉದ್ದೇಶಗಳ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಹಮ್ಮಿಕೊಂಡ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ರೈತ ಪರವಾಗಿರುವ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಆಡಳಿತ ಮಂಡಳಿ ಸದಸ್ಯರು ರಾಜಕೀಯ ಮಾಡದೇ ಸಂಸ್ಥೆಯ ಹಾಗೂ ರೈತರ ಹಿತ ಕಾಯುವತ್ತ ಗಮನ ಹರಿಸಿದಾಗ ಮಾತ್ರ ಸಂಘಗಳು ಪ್ರಗತಿ ಹೊಂದಲು ಸಾಧ್ಯ. 

ಕಳೆದ 20 ವರ್ಷಗಳಲ್ಲಿ 102 ಕೋಟಿ ಪತ್ತು ಹೊಂದುವ ಮೂಲಕ ತಾಲೂಕಿನ ಕೃಷಿ ಪತ್ತಿನ ಸಂಘಗಳು ಉತ್ತಮ ವ್ಯವಹಾರ ನಡೆಸುತ್ತಿರುವದು ಸಂತಸ ತಂದಿದೆ. ರೈತಪರವಿರುವ ಸಂಘಗಳು ರೈತರಿಗೆ ದ್ರೋಹ ಬಗೆಯುವ ಕೆಲಸ ಮಾಡಬಾರದು. ಸಂಕಷ್ಟದಲ್ಲಿರುವ ರೈತ ಕುಲವನ್ನು ಮೇಲೆತ್ತಬೇಕಿದ್ದು, ಅದಕ್ಕೆಲ್ಲಾ ಆಡಳಿತ ಮಂಡಳಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್.ಎಸ್.ಢವಣ ಮಾತನಾಡಿ, ಸಹಕಾರಿ ಸಂಘಗಳ ಲಾಭದಲ್ಲಿ ಶೇ.30 ರಷ್ಟು ಸರಕಾರಕ್ಕೆ ತೆರಿಗೆ ಕಟ್ಟುವದು ಸಂಸ್ಥೆಗೆ ಹೊರೆಯಾಗುತ್ತಿದೆ. ಕಾರಣ ಶೇ. 10 ರಷ್ಟು ತೆರಿಗೆ ಮಾತ್ರ ಕಟ್ಟಲು ಅವಕಾಶ ಕಲ್ಪಿಸುವಂತೆ ಕೇಂದ್ರದ ಮೇಲೆ ಒತ್ತಡ ತರುವಲ್ಲಿ ರಾಜ್ಯ ಸರಕಾರ ಮುಂದಾಗಲು ಶಾಸಕರು ಒತ್ತಾಯಿಸಬೇಕು ಎಂದು  ಮನವಿ ಮಾಡಿದರು.

ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಜಿ.ಜಿ. ಪಾಟೀಲ ಮಾತನಾಡಿ, ಬೀಜ ಮತ್ತು ಗೊಬ್ಬರ ಖರೀದಿಸಲು ಸಾಕಷ್ಟು ರೈತರು ಖಾಸಗಿ ಸಾಲಗಾರರನ್ನು ಅವಲಂಭಿಸಬೇಕಿತ್ತು. ಈಗ ಕೃಷಿ ಪತ್ತಿನ ಸಂಘಗಳಲ್ಲಿ ಸಾಲ ನೀಡುವ ಮೂಲಕ ಅಧಿಕ ಬಡ್ಡಿ ಸುಳಿಗೆ ಸುಲಕುತ್ತಿರುವ ರೈತರನ್ನು ಕಾಪಾಡಿದಂತಾಗಿದೆ. ಎಲ್ಲ ಸಹಕಾರಿ ಸಂಘಗಲ್ಲಿ ಬೀಜ ಮತ್ತು ಗೊಬ್ಬರ ಮಾರಾಟ ಕೇಂದ್ರಗಳನ್ನು ಪ್ರಾರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.

ಜಿಲ್ಲಾ ಸಹಕಾರ ಯೂನಿಯನ್ಸ್ ನಿರ್ದೇಶಕ ಮಾರುತಿ ಕರಿಗಾರ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಅಭಿವೃದ್ದಿ ಅಧಿಕಾರಿ ಜಿ.ಬಿ. ಯಾವಗಲ್ಲ, ತಾಲೂಕಾ ನಿಯಂತ್ರಣಾಧಿಕಾರಿ ಆರ್.ಎಸ್. ವಾಲಿ, ಬೆಳಗಾವಿ ಸಹಕಾರಿ ಅಭಿವೃದ್ದಿ ಅಧಿಕಾರಿ ಶಂಕರ ಕರಬಸಣ್ಣವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಜಿ.ಸ.ಯೂ.ನಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ. ಹಿರೇಮಠ ಸ್ವಾಗತಿಸಿ, ವಂದಿಸಿದರು.