ಅಖಂಡತೆಗೆ ಬೆಲೆಯಿದೆ ಒಡಕಿನಲ್ಲಿಲ್ಲ : ರಂಭಾಪುರಿಶ್ರೀ

ಹುಬ್ಬಳ್ಳಿ 19: ಮನುಷ್ಯನಲ್ಲಿ ಅರಿವು ಮರವು ಎರಡೂ ಇವೆ. ಅರಿತು ಬಾಳಿದರೆ ಬಾಳು ಸಾರ್ಥಕ. ಮರೆತು ಬಾಳಿದರೆ ದುರ್ಗತಿ. ಸಾಮರಸ್ಯದ ಬದುಕಿನಿಂದ ಶ್ರೇಯಸ್ಸು ಪ್ರಾಪ್ತಿ. ಸ್ವಾರ್ಥದಿಂದ ಬದುಕು ದುರ್ಬಲಗೊಳ್ಳುತ್ತದೆ. ಅಖಂಡತೆಯಲ್ಲಿ ಇರುವ ಬೆಲೆ ಶಕ್ತಿ ಒಡಕಿನಲ್ಲಿ ಇಲ್ಲವೆಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ  ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಅವರು ವಿದ್ಯಾನಗರದ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಬಾಳೆಹೊನ್ನೂರಿನ ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಹಾಗೂ ಬೆಂಗಳೂರಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಶಿವಾಚಾರ್ಯ ಸಂಸ್ಕೃತಿ ಪುನಶ್ಚೇತನ ಚಿಂತನಾ ಸಮಾವೇಶದ ಸಮಾರೋಪ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಪ್ರಕೃತಿ ಮಾನವನನ್ನು ಸೃಷ್ಠಿಸಿದರೆ ಸಂಸ್ಕಾರ ದೇವ ಮಾನವರನ್ನು ಸೃಷ್ಠಿಸುತ್ತದೆ. ವೀರಶೈವ ಧರ್ಮದಲ್ಲಿ ಅಂತರಂಗ ಬಹಿರಂಗ ಶುದ್ಧಿಗೆ ಕೊಟ್ಟ ಸಂದೇಶ ಉಜ್ವಲ ಬದುಕಿಗೆ ಭದ್ರ ಅಡಿಪಾಯವಾಗಿದೆ. ಜಗದ ಕತ್ತಲೆ ಕಳೆಯಲು ಸೂರ್ಯ ಬೇಕಾಗಿದ್ದಾನೆ. ಬದುಕು ಬೆಳಗಲು ಗುರುವಿನ ಅವಶ್ಯಕತೆಯಿದೆ. ಹಣ ಕಳೆದುಕೊಂಡು ಬದುಕಬಹುದು. ಆದರೆ ಗುಣ ಕಳೆದುಕೊಂಡು ಬಾಳಲಾಗದು. ಬಿತ್ತಿದ ಬೀಜದಂತೆ ಫಲ ಹೇಗೋ ಹಾಗೆ ನಮ್ಮ ಆಚರಣೆಯಂತೆ ಫಲ ಪ್ರಾಪ್ತಿಯಾಗುತ್ತದೆ. ಶಿವಾಗಮಗಳಲ್ಲಿ ವೀರಶೈವ ಧರ್ಮ ಸಂಸ್ಕೃತಿ ಗುರು ಪರಂಪರೆಯ ಹಿರಿಮೆಯನ್ನು ಕಾಣಬಹುದು. ಧರ್ಮ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ಪೀಠ ಮತ್ತು ಮಠಗಳು ಸದಾ ಶ್ರಮಿಸುತ್ತಾ ಬಂದಿವೆ. ವೀರಶೈವ ಧರ್ಮ ಪರಂಪರೆಯಲ್ಲಿ ಬರುವ ಶಿವಾಚಾರ್ಯರು ಸಂಸ್ಕಾರ ಸದ್ವಿಚಾರಗಳನ್ನು ಬೋಧಿಸುವುದರ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತಾ ಬಂದಿದ್ದಾರೆ. ನಗರದಲ್ಲಿ ಮೂರು ದಿನಗಳ ಕಾಲ ಶಿವಾಚಾರ್ಯ ಸಂಸ್ಕೃತಿ ಪುನಶ್ಚೇತನ ಚಿಂತನಾ ಸಮಾವೇಶ ತಮಗೆ ತೃಪ್ತಿ ತಂದಿದೆ ಎಂದರು. 

ಎಸಳೂರು ತೆಂಕಲಗೂಡು ಬೃಹನ್ಮಠದ ಚನ್ನಮಲ್ಲಿಕಾಜರ್ುನ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ವೀರಶೈವ ಧರ್ಮದ ಆದರ್ಶಗಳನ್ನು ಅರಿಯಲಾರದವರು ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದ್ದಾರೆ. ಸೈದ್ಧಾಂತಿಕ ತತ್ವಗಳನ್ನು ಸರಿಯಾಗಿ ಅರಿತು ಬಾಳಿದಾಗ ಯಾವುದೇ ಸಮಸ್ಯೆಗಳಿಲ್ಲ. ಅರಿವಿನ ಕೊರತೆ ಎಲ್ಲ ಸಮಸ್ಯೆಗಳಿಗೆ ಮೂಲವೆಂದರು. ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ವೀರಶೈವ ಧರ್ಮ ಸಂಸ್ಕೃತಿ ವಿಶ್ವಬಂಧುತ್ವವನ್ನು ಸಾರುತ್ತದೆ. ಜಾತ್ಯಾತೀತ ಪರಿಕಲ್ಪನೆಯೊಂದಿಗೆ ಬದುಕಿನ ವಿಕಾಸಕ್ಕೆ ಆಚರಣೆಗಳು ಮೂಲ ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ. ಧರ್ಮ ಸಂಸ್ಕೃತಿಯ ಏಳಿಗೆ ಅಭ್ಯುದಯಕ್ಕಾಗಿ ಶಿವಾಚಾರ್ಯರು ಕೊಟ್ಟ ಕೊಡುಗೆ ಅಮೂಲ್ಯವಾದದ್ದು. ಅವರ ಮಾರ್ಗದರ್ಶನ ಸಂಸ್ಕಾರದಲ್ಲಿ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ ಎಂದರು. ನೇತೃತ್ವ ವಹಿಸಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು 2020ನೇ ಇಸ್ವಿ ದಿನದಶರ್ಿಕೆ ಬಿಡುಗಡೆ ಮಾಡಿ ಮಾತನಾಡಿದರು. ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ವೀರಶೈವ ಧರ್ಮದ ಮಹತ್ವ ಅರಿತು ಬಾಳಬೇಕೆಂದರು. ಸಮಾರಂಭದಲ್ಲಿ ಪಾಲ್ಗೊಂಡು ಪ್ರಾಸ್ತಾವಿಕವಾಗಿ ಮಾತನಾಡಿದ ಪಾಳಾ ಹಿರೇಮಠದ ಡಾ.ಗುರುಮೂತರ್ಿ ಶಿವಾಚಾರ್ಯ ಸ್ವಾಮಿಗಳು ಬೆಟ್ಟಕ್ಕೆ ಬೆಟ್ಟದ ಅವಶ್ಯಕತೆ ಇಲ್ಲದಿರಬಹುದು. ಆದರೆ ಮನುಷ್ಯನಿಗೆ ಮನುಷ್ಯನ ಅವಶ್ಯಕತೆಯಿದೆ. ಮನುಷ್ಯ ಕಲಿಕೆ ಗಳಿಕೆಯೊಂದಿಗೆ ಒಂದಿಷ್ಟು ಶಿವಜ್ಞಾನ ಸಂಪಾದಿಸಿಕೊಂಡು ಬಾಳಿದರೆ ಜೀವನ ಸಾರ್ಥಕಗೊಳ್ಳುವುದೆಂದರು. 

ಅಧ್ಯಕ್ಷತೆ ವಹಿಸಿದ ಡಾ.ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಬೆಸೆಯುವುದು ಧರ್ಮದ ಕೆಲಸವಾಗಿದೆ. ಆದರೆ ಇಂದು ಜಾತಿಗಳು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿರುವುದು ಒಳ್ಳೆಯದಲ್ಲ. ಉದಾತ್ತ ಸಂಸ್ಕೃತಿ ಧರ್ಮದ ಆಚರಣೆಗಳನ್ನು ಬೆಳೆಸಲು ವೀರಶೈವ ಮಠಗಳು ಪ್ರಾಚೀನ ಕಾಲದಿಂದ ಶ್ರಮಿಸಿದ್ದನ್ನು ಯಾರೂ ಮರೆಯಬಾರದು. ಶಿವಾಚಾರ್ಯರು ಆತ್ಮಬಲ ವೃದ್ಧಿಸಿಕೊಂಡು ಧರ್ಮ ಮತ್ತು ಸಮಾಜ ಕಟ್ಟುವ ಸಂಕಲ್ಪ ಕೈಗೊಳ್ಳಬೇಕೆಂದರು. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರಾದ ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಹಾಗೂ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಸಮಾರೋಪ ನುಡಿ ಸೇವೆ ಸಲ್ಲಿಸಿದರು. 

ದಿನ ನಿತ್ಯದಲ್ಲಿ 35 ರಿಂದ 45 ಜನ ಮಠಾಧೀಶರು ಪಾಲ್ಗೊಂಡು ಧರ್ಮ ಸಂಸ್ಕೃತಿ ಪುನರುತ್ಥಾನಗೊಳಿಸಲು ಸಂಕಲ್ಪ ಕೈಗೊಂಡರು. ರಂಭಾಪುರಿ ಜಗದ್ಗುರುಗಳವರ ಭಾವಚಿತ್ರ ಒಳಗೊಂಡ ದಿನದಶರ್ಿಕೆಯನ್ನು ಬಿಡುಗಡೆ ಮಾಡಲಾಯಿತು. ಜಗದ್ಗುರು ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಸ್ವಾಗತಿಸಿದರು. ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಮಳಲಿಮಠದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ನಿರೂಪಣೆ ಮಾಡಿದರು. 

ಆರೋಗ್ಯ ತಪಾಸಣೆ:  ಶಿವಾಚಾರ್ಯ ಸಂಸ್ಕೃತಿ ಚಿಂತನಾ ಸಮಾವೇಶದಲ್ಲಿ ಪಾಲ್ಗೊಂಡ ಎಲ್ಲ ಶ್ರೀಗಳವರಿಗೆ ಡಾ. ಸಿದ್ಧನಗೌಡ ಪಾಟೀಲ,     ಡಾ. ಶೋಭಾ ಪಾಟೀಲ ದಂಪತಿಗಳು ಬಿ.ಪಿ, ಶುಗರ, ಕಣ್ಣು, ಎಲುಬು, ಪರೀಕ್ಷಿಸಿ ಉಚಿತ ಚಿಕಿತ್ಸೆ ಹಾಗೂ ಔಷಧಿಗಳನ್ನು ವಿತರಿಸಿದರು. ಹುಬ್ಬಳ್ಳಿಯ ಸ್ನೇಹಿತರ ಹೋಟೆಲ್ ಮಾಲೀಕ ಶ್ರೀಶೈಲಯ್ಯ ಮೂಲಿಮನಿ ಪ್ರಸಾದ ಸೇವೆ ಸಲ್ಲಿಸಿದರು.